ಚಿಕ್ಕಮಗಳೂರು: ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆ ಜಾರಿ ಮತ್ತಷ್ಟು ವಿಳಂಬ ಆಗುವ ಸಾಧ್ಯತೆ ಇದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿ ಗದ್ದೆ ಆಶ್ರಮದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆಗಸ್ಟ್ 18 ನೇ ತಾರೀಖು ಗೃಹಲಕ್ಷ್ಮಿಯರ ಖಾತೆಗೆ ಹಣ ಸಿಗುವ ಸಾಧ್ಯತೆ ಇದ್ದು, ಅಪ್ಲಿಕೇಶನ್ ಹಾಕಲು ಮತ್ತಷ್ಟು ವಿಳಂಬ ಆಗಲಿದೆ ಎಂದು ಹೇಳಿದ್ದಾರೆ.
ಆಗಸ್ಟ್ 17 ಅಥವಾ 18ಕ್ಕೆ ಖಂಡಿತ ಮನೆ ಒಡತಿಯರ ಖಾತೆಗಳಿಗೆ ಹಣ ಸೇರುತ್ತದೆ. ಯೋಜನೆಯ ಕೆಲವೊಂದು ಬದಲಾವಣೆಯಿಂದ ಜನರಿಗೆ ತಲುಪುವಲ್ಲಿ ವಿಳಂಬವಾಗುತ್ತಿದೆ ಅಷ್ಟೇ. ಗೃಹ ಲಕ್ಷ್ಮಿ ಯೋಜನೆ ಜನರಿಗೆ ಸರಳವಾಗಿ, ಆದಷ್ಟು ಸುಲಭವಾಗಿ ಸಿಗಬೇಕು ಎನ್ನುವ ಕಾರಣಕ್ಕೆ ಅಧಿಕಾರಿಗಳಿಗೆ ಕೆಲವು ಬದಲಾವಣೆಗಳ ಬಗ್ಗೆ ಸೂಚನೆ ನೀಡಿದ್ದೇವೆ. ಗ್ರಾಮ 1 ಕರ್ನಾಟಕ, ಬೆಂಗಳೂರು 1 ನಲ್ಲಿ ಇದರ ಸೇವೆ ಲಾಭ ಪಡೆಯಬಹುದು ಎಂದು ನಾವು ಹೇಳಿದ್ದೆವು. ಆದರೆ ಈಗ ಬಾಪೂಜಿ ಸೇವಾ ಕೇಂದ್ರಗಳನ್ನು ಸೇರಿಸಿದ್ದೇವೆ.
ಅಲ್ಲೂ ಇದರ ಸೇವೆಯನ್ನು ಪಡೆಯಬಹುದು. ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರ ಇದೆ. ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಆಸಕ್ತಿ ಇರೋರಿಗೆ ಪ್ರಜಾ ಪ್ರತಿನಿಧಿ ಮಾಡುತ್ತೇವೆ. ಅವರಿಗೆ ಯಾವ ಖಾತೆಗೆ ಬೇಕೋ ಅದೇ ಖಾತೆಗೆ ಹಣ ನೀಡುವ ಕೆಲಸ ಮಾಡುತ್ತೇವೆ. ನಿನ್ನೆ ಕೆಲವು ಬದಲಾವಣೆ ಮಾಡಿದ್ದೇವೆ, ಅಧಿಕಾರಿಗಳು ಈಗಾಗಲೇ ಸಾಫ್ಟ್ವೇರ್ ರೆಡಿ ಮಾಡುತ್ತಿದ್ದಾರೆ. ಆದಷ್ಟು ಶೀಘ್ರದಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಯೋಜನೆಗೆ ಚಾಲನೆ ನೀಡುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಈ ಬಾರಿಯ ವಿಧಾನಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಐದು ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಹಿನ್ನೆಲೆ ಇದೀಗ ಘೋಷಿಸಿದ್ದ ಗ್ಯಾರೆಂಟಿ ಯೋಜನೆಗಳನ್ನು ಒಂದೊಂದಾಗಿ ಜಾರಿ ಮಾಡುತ್ತಿದೆ. ಆ ಪ್ರಯುಕ್ತ ಇತ್ತೀಚೆಗೆ ಸಿದ್ದರಾಮಯ್ಯ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೆ ಚಾಲನೆ ನೀಡಿದ್ದರು. ಆದರೆ ಮನೆ ಯಜಮಾನಿಯ ಖಾತೆಗೆ 2000 ರೂ. ಜಮೆ ಆಗುವ ಗೃಹಲಕ್ಷ್ಮಿ ಯೋಜನೆಗೆ ಸರ್ಜಿ ಸಲ್ಲಿಸುವ ಪ್ರಕ್ರಿಯೆಗಳಿದ್ದು, ಆ ಹಿನ್ನೆಲೆಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಶೀಘ್ರದಲ್ಲೇ ಯೋಜನೆ ಜಾರಿಯಾಗುವ, ಮನೆಯೊಡತಿಯರ ಖಾತೆಗೆ ಹಣ ಜಮೆ ಆಗುವ ಬಗ್ಗೆ ಭರವಸೆ ನೀಡಿದೆ.