ಚಿಕ್ಕಮಗಳೂರು : ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಡಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ದೂರು ದಾಖಲಾಗಿದೆ. ರಾಹುಲ್ ಗಾಂಧಿ ಬೆಂಬಲಿಸಿ ಪ್ರತಿಭಟನೆಯ ವೇಳೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಮೊಹಮ್ಮದ್ ನಲಪಾಡ್ ಅವಹೇಳನಕಾರಿ ಭಾಷಣ ಮಾಡಿದ್ದಾರೆ. ಹೀಗಾಗಿ ಮೊಹಮ್ಮದ್ ನಲಪಾಡ್ ವಿರುದ್ಧ ದೂರು ನೀಡಲಾಗಿದೆ ಎಂದು ಬಿಜೆಪಿ ಮುಖಂಡ ಪ್ರದೀಪ್ ನಾಯಕ್ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರದೀಪ್ ನಾಯಕ್ ದೂರು ನೀಡಿದ್ದು, ಎಫ್‌ಐಆರ್ ದಾಖಲು ಮಾಡುವಂತೆ ಕೋರಿ ಬಿಜೆಪಿ ಮುಖಂಡ ಪ್ರದೀಪ್ ನಾಯಕ್ ಕೋರ್ಟ್ ಮೊರೆ ಹೋಗಿದ್ದಾರೆ. ಮೊಹಮ್ಮದ್ ನಲಪಾಡ್ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ಕಡೂರಿನ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಪ್ರದೀಪ್ ನಾಯಕ್ ಅರ್ಜಿ ಸಲ್ಲಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದೇ ವಿಷಯಕ್ಕೆ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಪ್ರಧಾನಿ ಮೋದಿ ವಿರುದ್ಧ ಮೊಹಮ್ಮದ್ ನಲಪಾಡ್ ಕೂಡ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ನಾಯಕ್ ತಾವು ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಲಪಾಡ್ ಭಾಷಣ ಹೀಗಿದೆ: 'ನನ್ನ ನಾಯಕರಾದಂಥಹ ರಾಹುಲ್ ಗಾಂಧಿ ಅವರ 2019ರಲ್ಲಿ ಮಾತನಾಡಿದ ಒಂದು ಮಾತಿಗೆ 2 ವರ್ಷ ಶಿಕ್ಷೆ ಎಂದರು. ಆ ಬೇಜಾರು ಹಾಗೆ ಸಂತೋಷವಾಯಿತು ನನಗೆ, ಒಬ್ಬ ವ್ಯಕ್ತಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದಾನೆ. ಭಾರತವನ್ನು ಒಗ್ಗೂಡಿಸಲು ನಡೆದಿದ್ದಾನೆ. ಭಾರತದ ಐಕ್ಯತೆಗಾಗಿ ನದೆದಿದ್ದಾನೆ. ಆ ಭಾರತದ ರಾಹುಲ್ ಗಾಂಧಿಯನ್ನು ನೋಡಿ ಮೋದಿಯವರು ಭಯ ಪಟ್ಟಿದ್ದಾರೆ. ಅದಕ್ಕೆ ಇವರ ಮೇಲೆ ಕೇಸ್ ಹಾಕುತ್ತಿದ್ದಾರೆ' ಎಂದು ನಲಪಾಡ್ ಆರೋಪಿಸಿದ್ದರು.
'ಗಾಂಧಿ ಹೈ ಸಾವರ್ಕರ್ ನಹಿ ಯಾಕೆಂದರೆ ಗಾಂಧಿಯೆಂದರೆ ಈ ದೇಶಕ್ಕೋಸ್ಕರ, ಸ್ವಾಂತ್ರತ್ಯಕ್ಕೋಸ್ಕರ ಹೋರಾಡಿದಂಥಹ ವ್ಯಕ್ತಿ. ಈ ದೇಶಕ್ಕೋಸ್ಕರ ಪ್ರಾಣ ಕೊಟ್ಟ ವ್ಯಕ್ತಿ. ಸಾರ್ವಕರ್ ಅವರು ಕ್ಷಮೆ ಕೇಳಿದಂತಹವರು. ನಾವು ಯಾವುದೇ ಕಾರಣಕ್ಕೂ ನಾವಾಡಿದ ಮಾತಿಗೆ ಕ್ಷಮೆ ಕೇಳಲು ಇಷ್ಟಪಡಲ್ಲ, ನಾವು ಕ್ಷಮೆ ಕೇಳುವುದು ಇಲ್ಲ. ಅಂತ ಜೀವಮಾನದಲ್ಲಿ ಬಂದವರು ಅಲ್ಲ ನಾವು. ನಾವು ಬಂದಿರುವುದು ಕಾಂಗ್ರೆಸ್ ಜೀವಮಾನದಲ್ಲಿ, ಕಾಂಗ್ರೆಸ್ನ ಶಕ್ತಿ, ಕಾಂಗ್ರೆಸ್ನ ರಕ್ತ ನಮ್ಮೆರಲ್ಲೂ ಹರಿಯುತ್ತಿರುವುದು'.
'ಇವತ್ತು ಒಬ್ಬ ರಾಹುಲ್ ಗಾಂದಿ ಮೇಲೆ ನೀವು ಕೇಸ್ ಹಾಕಬಹುದು. ಒಂದು ರಾಹುಲ್ ಗಾಂಧಿಯನ್ನು ನೀವು ಹಿಡಿದರೆ, ರಾಹುಲ್ ಗಾಂಧಿ ಹೇಳಿರುವ ಅದೇ ಮಾತನ್ನು ನಾನು ಹೇಳಲು ನಾನು ರೆಡಿ ಇದ್ದೇನೆ. "ಎಲ್ಲಾ ಮೋದಿ ಹೆಸರಿಟ್ಟವರು ಕಳ್ಳರೇ". ಏನು ಮಾಡುತ್ತೀರ ಕೇಸ್ ಹಾಕುತ್ತೀರಾ? ಹಾಕಿಕೋಳ್ಳಿ. ನಿಜ ಹೇಳಿದರೆ ಭಯವಾಗುತ್ತೆ ನಿಮಗೆ. ನೀರವ್ ಮೋದಿ ಊರು ಬಿಟ್ಟು ಹೋಗಲಿಲ್ವಾ. ಇದನ್ನು ಹೇಳುವುದು ತಪ್ಪಾ. ಈ ಪ್ರಜಾಪ್ರಭುತ್ವದಲ್ಲಿ ನಾನು ಇಲ್ಲಿ ನಿಂತು ಮಾತನಾಡುತ್ತಿದ್ದೇನೆ ಅಂದರೆ, ನೀವು ಇಲ್ಲಿ ಕೂತು ಕೇಳುತ್ತಿದ್ದೀರಿ ಅಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನ ಕಾರಣ ' ಎಂದು ನಲಪಾಡ್ ಹೇಳಿದ್ದರು.
ಇದನ್ನೂ ಓದಿ: ತ್ರಿಪುರಾ ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಿಜೆಪಿ ಶಾಸಕ!