ಚಿಕ್ಕಮಗಳೂರು: ಓಮಿನಿ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಓರ್ವ ಸವಾರ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರಿನಿಂದ ಹೊರನಾಡಿಗೆ ಪ್ರವಾಸ ಬಂದಿದ್ದವರ ವಾಹನಗಳು ಅಪಘಾತಕ್ಕೀಡಾಗಿ ಒಬ್ಬ ಮೃತಪಟ್ಟಿದ್ದಾನೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಳಗೂರು ಬಳಿ ಈ ದುರ್ಘಟನೆ ನಡೆದಿದೆ. ಬೆಂಗಳೂರಿನ ರಾಜಾಜಿ ನಗರದ ದಿವಾಕರ್ ಮೃತ ವ್ಯಕ್ತಿ ಆಗಿದ್ದು, ನೆಲಮಂಗಲದ ಧನರಾಜ್ ಎಂಬುವವರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಧನರಾಜ್ನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹೊರನಾಡಿನಿಂದ ಬೆಂಗಳೂರಿನ ಕಡೆ ಹೋಗುವಾಗ ಈ ಅವಘಡ ಜರುಗಿದ್ದು, ಸ್ಕೂಟಿಯಲ್ಲಿ ಇವರಿಬ್ಬರು 370 ಕಿ.ಮೀ. ದೂರದ ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದರು. ಇನ್ನು ಬಾಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.