ಚಿಕ್ಕಮಗಳೂರು : ಬೆಳಗಾವಿಯಲ್ಲಿ ಇಂದು ಮತ್ತೆ ಶಿವಾಜಿ ಪ್ರತಿಮೆ ಲೋಕಾರ್ಪಣೆ ವಿಚಾರದ ಬಗ್ಗೆ ಚಿಕ್ಕಮಗಳೂರಿನ ಬಾಳೆಹೊನ್ನೂರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ನಿಜವಾಗಿಲೂ ಇದು ಹಾಸ್ಯಾಸ್ಪದ, ಅದು ಸರ್ಕಾರದಿಂದ ನಿರ್ಮಾಣಗೊಂಡಿರುವ ಶಿವಾಜಿ ಪ್ರತಿಮೆ. ಸರ್ಕಾರ ಈ ಪ್ರತಿಮೆಯನ್ನ ಅಧಿಕೃತವಾಗಿ ಉದ್ಘಾಟಿಸಿದೆ. ಈಗ ಅಲ್ಲಿಗೆ ಭೇಟಿ ಕೊಡಬಹುದು, ಗೌರವ ಸಮರ್ಪಣೆ ಮಾಡಬಹುದು. ಆದ್ರೆ ಮತ್ತೆ ಉದ್ಘಾಟನೆ ಮಾಡುತ್ತಿರುವುದನ್ನು ಎಲ್ಲೂ ಕೇಳಿರಲಿಲ್ಲ, ನೋಡಿರಲಿಲ್ಲ. ಇದರಿಂದ ಅಧಿಕಾರ ಚಲಾವಣೆ ಮಾಡಬೇಕು ಎಂಬ ಲಾಲಸೆ ಎಷ್ಟಿದೆ ಎಂಬುದು ಗೊತ್ತಾಗುತ್ತೆ ಎಂದು ಬಾಳೆಹೊನ್ನೂರು ಮಠದ ಆವರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ನಡೆಯನ್ನು ಟೀಕಿಸಿದರು.
ನಂತರ ಸಂಸದೆ ಸಮಲತಾ ಬಿಜೆಪಿ ಸೇರುವ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿದ್ದು, ಸುಮಲತಾ ಅವರು ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದರು. ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆಯಲ್ಲಿ ವಿಧಾನಸಭೆಯ ಮಂತ್ರಿಗಳ ಕಚೇರಿಯಲ್ಲಿ 25 ಲಕ್ಷ ಹಣ ಸಿಕ್ಕಿತ್ತು. ಅದು ಅಂದಿನ ಸಚಿವ ಪುಟ್ಟಲಿಂಗಶೆಟ್ಟಿ ಅವರಿಗೆ ಸೇರಿದ ಹಣವಾಗಿತ್ತು. ಅವತ್ತು ಸರಿಯಾದ ತನಿಖೆ ನಡೆಸಿದ್ರಾ, ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸವನ್ನು ಮಾಡಿದರು ಎಂದು ಸಿಎಂ ಆರೋಪಿಸಿದರು.
ನಾವು ಲೋಕಾಯುಕ್ತಕ್ಕೆ ಎಲ್ಲಾ ಪವರ್ ನೀಡಿದ್ದೇವೆ : ಅಂದು ಲೋಕಾಯುಕ್ತ ಇದ್ದರೆ, ಅಂದೇ ಎಲ್ಲರ ಮೇಲೂ ಕೇಸ್ ಬೀಳುತ್ತಿತ್ತು. ಅವರು ಭ್ರಷ್ಟಾಚಾರವನ್ನು ರಕ್ಷಣೆ ಮಾಡಿ ಮುಚ್ಚಿ ಹಾಕುವ ಕೆಲಸ ಮಾಡಿದ್ದರು. ಇಂದು ನಾವು ಲೋಕಾಯುಕ್ತಕ್ಕೆ ಎಲ್ಲಾ ಪವರ್ ನೀಡಿದ್ದೇವೆ. ನಮ್ಮ ಪಕ್ಷದವರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಅದು ನಮ್ಮ ನೈತಿಕತೆ. ಮುಚ್ಚಿ ಹಾಕುವುದು ಅವರ ನೈತಿಕತೆ ಎಂದು ಚಿಕ್ಕಮಗಳೂರು ರಂಭಾಪುರಿ ಮಠದಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಜನ ಮತ್ತೊಮ್ಮೆ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಬಯಕೆಯಲ್ಲಿದ್ದಾರೆ ಎಂದು ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಮಠದ ಆವರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.
ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕಾಂಗ್ರೆಸ್ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್ ಭ್ರಷ್ಟಾಚಾರ ಹುಟ್ಟು ಹಾಕಿದ ರಕ್ತ ಬೀಜಾಸುರ ಪಕ್ಷ. ನೆಹರೂ ಕಾಲದಿಂದ ಮನಮೋಹನ್ ಸಿಂಗ್ ಕಾಲದವರೆಗೂ ಭ್ರಷ್ಟಾಚಾರ ತಾಂಡವವಾಡ್ತಿತ್ತು. ಕಾಂಗ್ರೆಸ್ ಸರ್ಕಾರ ಲೋಕಾಯುಕ್ತವನ್ನು ಯಾಕೆ ಬಂದ್ ಮಾಡ್ತು. ಹಲ್ಲಿಲ್ಲದ ಹುಲಿ ಮಾಡಿ, ಎಸಿಬಿಗೂ ಪವರ್ ಇಲ್ಲದಂತೆ ಮಾಡಿದ್ರು ಎಂದು ಜೋಶಿ ಹರಿಹಾಯ್ದರು.
ಇದನ್ನೂ ಓದಿ : ಬಿಜೆಪಿಗೆ ಸುಳ್ಳು ಮನೆ ದೇವರಾದರೆ, ಭ್ರಷ್ಟಾಚಾರ ಪಕ್ಷದ ಅಧಿಕೃತ ಕಾರ್ಯಕ್ರಮ: ಬಿ. ಕೆ ಹರಿಪ್ರಸಾದ್ ಲೇವಡಿ
ನಾವು ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದೇವೆ. ಸಿಎಂ, ಸರ್ಕಾರ ತಡೆಯಬಹುದಿತ್ತು. ಆದರೆ, ನಾವು ತಡೆಯಲಿಲ್ಲ. ಬಿಜೆಪಿ ಭ್ರಷ್ಟಾಚಾರದ ವಿರುದ್ಧವಾಗಿದೆ. ಅದಕ್ಕೆ ಲೋಕಾಯುಕ್ತ ಬಲ ನೀಡಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು, ಯಾರನ್ನೂ ಉಳಿಸುವ ಕೆಲಸ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : 'ಸಿದ್ದರಾಮಯ್ಯನವರ ಭ್ರಷ್ಟಾಚಾರದ ಬಗ್ಗೆ ಹೇಳಲು ಅರ್ಕಾವತಿ ಹಗರಣ ಒಂದೇ ಸಾಕು'