ಚಿಕ್ಕಮಗಳೂರು: ಪ್ರಾರ್ಥನಾ ಮಂದಿರದ ಮುಂಭಾಗ ಕಟ್ಟಿದ್ದ ಬಾವುಟದ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನಗರದಲ್ಲಿ ನಡೆದಿದೆ.
ಈ ಬಗ್ಗೆ ಎಸ್ಪಿ ಉಮಾ ಪ್ರಶಾಂತ್ ಪ್ರತಿಕ್ರಿಯಿಸಿದ್ದು, "ಶೃಂಗೇರಿಯ ಪಟ್ಟಣದ ವೆಲ್ ಕಮ್ ಗೇಟ್ ಮುಂಭಾಗ ದತ್ತಮಾಲಾ ಅಭಿಯಾನದ ಹಿನ್ನೆಲೆ ಶ್ರೀರಾಮಸೇನೆ ಕಾರ್ಯಕರ್ತರು ಬಾವುಟ ಕಟ್ಟಿದ್ದರು. ಪ್ರಾರ್ಥನಾ ಮಂದಿರದ ಮುಂಭಾಗದ ಬಾವುಟಗಳನ್ನು ಪೊಲೀಸರು ಪಟ್ಟಣ ಪಂಚಾಯಿತಿ ಸದಸ್ಯರ ಮೂಲಕ ತೆರವುಗೊಳಿಸಿದ್ದರು. ಆದರೆ ಈ ವಿಚಾರವಾಗಿ ಶ್ರೀರಾಮ ಸೇನೆ ಮುಖಂಡ ಅರ್ಜುನ್ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ರಫೀಕ್ ನಡುವೆ ಮಾತಿನ ಚಕಮಕಿ ನಡೆದಿದೆ. ಸದ್ಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಅರ್ಜುನ್ ಹಾಗೂ ರಫೀಕ್ನಿಂದ ದೂರು- ಪ್ರತಿ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ" ಎಂದರು.
"ಆ ಜಾಗ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. 2012ರಲ್ಲಿಯೇ ಜಿಲ್ಲಾಧಿಕಾರಿ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಅಲ್ಲಿ ಯಾರೂ ಕೂಡ ಬ್ಯಾನರ್ ಹಾಗೂ ಬಂಟಿಂಗ್ಸ್ ಕಟ್ಟಬಾರದು" ಎಂದು ಇದೇ ವೇಳೆ ಎಸ್ಪಿ ಉಮಾ ಪ್ರಶಾಂತ್ ಸ್ಪಷ್ಟಪಡಿಸಿದರು.
ಪ್ರಕರಣದ ವಿವರ: ಶೃಂಗೇರಿಯ ವೆಲ್ ಕಮ್ ಗೇಟ್ನಲ್ಲಿರುವ ಪ್ರಾರ್ಥನಾ ಮಂದಿರದ ಮುಂಭಾಗ ಬಾವುಟ, ಬಂಟಿಂಗ್ಸ್‌ಗಳನ್ನು ಕಟ್ಟಲಾಗಿತ್ತು. ಈ ವಿಚಾರವಾಗಿ ಶ್ರೀರಾಮಸೇನೆ ಮುಖಂಡ ಅರ್ಜುನ್ ಹಾಗೂ ಪಟ್ಟಣ ಪಂಚಾಯತಿ ಸದಸ್ಯ ರಫೀಕ್ ನಡುವೆ ಮಾತಿನ ಚಕಮಕಿ ನಡೆದಿದೆ. ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಇಬ್ಬರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯಾದ್ಯಂತ ಶ್ರೀ ರಾಮಸೇನೆ ವತಿಯಿಂದ ದತ್ತಮಾಲಾ ಅಭಿಯಾನ ಆರಂಭವಾಗಿದೆ. ಶೃಂಗೇರಿಯಲ್ಲೂ ಶ್ರೀರಾಮ ಸೇನೆಯ ಪದಾಧಿಕಾರಿಗಳು, ಕಾರ್ಯಕರ್ತರು ಮಾಲೆ ಧರಿಸಿದ್ದು ನಿನ್ನೆ ಪಟ್ಟಣದಾದ್ಯಂತ ಬಂಟಿಂಗ್ಸ್ ಹಾಗೂ ಬಾವುಟ ಕಟ್ಟಿದ್ದರು. ಈಗ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಮ್ಮ ಬಾವುಟಗಳನ್ನು ಹಾಕಿದ್ದಕ್ಕೆ ತಕರಾರು ಮಾಡಲಾಗಿದೆ. ಬಾವುಟದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವ ವೇಳೆ ನನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಲಾಗಿದೆ. ಈ ಕುರಿತು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನಾ ಮುಖಂಡ ಅರ್ಜುನ್ ಶೃಂಗೇರಿ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ. ಜೀವ ಬೆದರಿಕೆ ಹಾಗೂ ಅಭದ್ರತೆ ನನಗೆ ಕಾಡುತ್ತಿದೆ. ಜನರ ಪರವಾಗಿ ಮಾತನಾಡಬೇಕಾದ ಅವಶ್ಯಕತೆಯಿದೆ. ಸೂಕ್ತ ತನಿಖೆ ಹಾಗೂ ಭದ್ರತೆಗೆ ಕೋರಿ ರಫೀಕ್ ಅಹಮದ್ ಕೂಡ ಶೃಂಗೇರಿ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ಘಟನಾ ಸಂಬಂಧ ಕೊಪ್ಪ ಎಎಸ್ಪಿ ಗುಂಜನ್ ಆರ್ಯ ಶೃಂಗೇರಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ದತ್ತಮಾಲಾ ಅಭಿಯಾನಕ್ಕೆ ಚಾಲನೆ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಗಂಗಾಧರ್ ಕುಲಕರ್ಣಿ