ಚಿಕ್ಕಮಗಳೂರು: ಜಿಲ್ಲಾ ಬಿಜೆಪಿ ಕಚೇರಿಯ ಮುಂಭಾಗ ಕಡೂರು ತಾಲೂಕಿನ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ಶಾಸಕರ ಮಾತಿನ ಚಕಮಕಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಗರ ಅಧ್ಯಕ್ಷರು ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಕಾರ್ಯಕ್ರಮ ಮುಗಿಸಿಕೊಂಡು ತುರ್ತಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಬೇಕಿತ್ತು.
ಜಿಲ್ಲಾ ಬಿಜೆಪಿ ಕಚೇರಿಯಿಂದ ಹೋಗುವ ವೇಳೆ ಕಚೇರಿಯ ಮುಂಭಾಗ ನಿಲ್ಲಿಸಿದ್ದ ಅವರ ಕಾರು ಸ್ಥಳದಲ್ಲಿ ಇರಲಿಲ್ಲ. ಇದರಿಂದ ಕೋಪಗೊಂಡ ಬೆಳ್ಳಿ ಪ್ರಕಾಶ್ ಪೊಲೀಸರಿಗೆ ನನ್ನ ಕಾರು ಎಲ್ಲಿ ಎಂದು ಕೇಳಿದ್ದಾರೆ. ಕಾರು ನಿಲ್ಲಿಸಲು ಜಾಗ ಇರಲಿಲ್ಲ ಹಾಗಾಗಿ ಮುಂದೆ ತೆಗೆದುಕೊಂಡು ಹೋಗಿ ನಿಮ್ಮ ಚಾಲಕ ನಿಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಎಸ್ಐ ಜಗದೀಶ್ ಅವರ ಮಾತಿಗೆ ಕೋಪಗೊಂಡ ಶಾಸಕ ಬೆಳ್ಳಿ ಪ್ರಕಾಶ್ ಮಂತ್ರಿಗೊಂದು ಕಾನೂನು, ಶಾಸಕರಿಗೆ ಇನ್ನೊಂದು ಕಾನೂನ? ಎಂದು ಪ್ರಶ್ನೆ ಮಾಡಿ, ಪೊಲೀಸ್ ಅಧಿಕಾರಿಗೆ ಆವಾಜ್ ಹಾಕಿದ್ದಾರೆ. ನಂತರ ಪೊಲೀಸರೇ ಶಾಸಕರನ್ನ ಸಮಾಧಾನಪಡಿಸಿ ಕಳುಹಿಸಿದ್ದಾರೆ.