ಚಿಕ್ಕಮಗಳೂರು: ಜಿಲ್ಲೆಯ ಜಿಲ್ಲಾಸ್ಪತ್ರೆಯಿಂದ ಕಳೆದ ಏಪ್ರಿಲ್ನಲ್ಲಿ ಅಕ್ರಮವಾಗಿ ಮಾರಾಟವಾಗಿದ್ದ ಮಗುವನ್ನು ಮಕ್ಕಳ ರಕ್ಷಣಾ ಘಟಕ ರಕ್ಷಣೆ ಮಾಡಿ, ಸರ್ವೋದಯ ಸಮಾಜ ಸೇವಾ ಸಂಸ್ಥೆಯ ದತ್ತು ಕೇಂದ್ರಕ್ಕೆ ನೀಡಿದೆ.
ಆಸ್ಪತ್ರೆಯ ಸಿಬ್ಬಂದಿಯಿಂದ ಅಕ್ರಮವಾಗಿ ಮಗುವನ್ನು ಪಡೆದುಕೊಂಡಿದ್ದ ಪೋಷಕರ ವಿರುದ್ಧ ದೂರು ದಾಖಲಿಸುವಂತೆ ಜಿಲ್ಲಾ ಸರ್ಜನ್‍ಗೆ ಮಕ್ಕಳ ಕಲ್ಯಾಣ ಸಮಿತಿ ಸೂಚನೆ ನೀಡಿತ್ತು. ಪೊಲೀಸರ ಸಮ್ಮುಖದಲ್ಲಿ ಶಂಕರಪುರಕ್ಕೆ ತೆರಳಿ ಮಕ್ಕಳ ರಕ್ಷಣಾ ಘಟಕ 8 ತಿಂಗಳ ಮಗುವನ್ನು ವಶಕ್ಕೆ ಪಡೆದುಕೊಂಡಿದೆ. ಮಗುವಿನ ಪೋಷಕರು ಹಾಗೂ ಅಕ್ರಮವಾಗಿ ಮಗು ಪಡೆದಿದ್ದ ಪೋಷಕರು, ಮಗುವನ್ನು ಮಾರಾಟ ಮಾಡಿದ ಆರೋಪ ಎದುರಿಸುತ್ತಿರುವ ಆಸ್ಪತ್ರೆಯ ನರ್ಸ್ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಂಗನವಾಡಿ, ಆಶಾಕಾರ್ಯಕರ್ತೆ, ಮಗುವಿನ ಪೋಷಕರು ವಾಸವಿರುವ ಗುಲ್ಲನ್ ಪೇಟೆ ವ್ಯಾಪ್ತಿಯ ಆಶಾ ಕಾರ್ಯಕರ್ತೆ, ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯ ಕಂಡು ಬಂದಿರುವುದರಿಂದ 5 ಜನರಿಗೂ ನೋಟಿಸ್ ಜಾರಿ ಮಾಡಲು ಸೂಚನೆ ನೀಡಲಾಗಿದೆ.
ಓದಿ:ಸ್ಥಳೀಯ ವ್ಯಕ್ತಿ ಮೇಲೆ ಪಿಎಸ್ಐನಿಂದ ಹಲ್ಲೆ ಆರೋಪ: ಕ್ರಮಕ್ಕೆ ಗ್ರಾಮಸ್ಥರ ಪಟ್ಟು
ಮಗುವಿನ ಅಕ್ರಮ ಮಾರಾಟ, ಅಕ್ರಮ ದತ್ತು ಸ್ವೀಕಾರದ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ದೂರು ದಾಖಲಾಗುತ್ತಿದ್ದಂತೆಯೇ ಎಚ್ಚೆತ್ತು ಕೊಂಡ ಮಕ್ಕಳ ಕಲ್ಯಾಣ ಸಮಿತಿಯವರು ನೋಂದಣಾಧಿಕಾರಿಯೊಂದಿಗೆ ಚರ್ಚಿಸಿ ಮಗುವಿನ ದತ್ತು ನೋಂದಣಿಯನ್ನು ತಡೆ ಹಿಡಿದಿದ್ದರು. ಮಗುವಿಗೆ ಜನ್ಮ ನೀಡಿದ ತಂದೆ - ತಾಯಿ ಬಗ್ಗೆಯೂ ಈ ಪ್ರಕರಣದಲ್ಲಿ ಅನುಮಾನವಿದ್ದು, ಅಕ್ರಮವಾಗಿ ಮಗುವನ್ನು ದತ್ತು ನೀಡಿದ್ದರೇ ಅವರ ವಿರುದ್ಧವೂ ದೂರು ದಾಖಲಿಸಲು ಮಕ್ಕಳ ಕಲ್ಯಾಣ ಸಮಿತಿ ಯೋಚನೆ ಮಾಡುತ್ತಿದೆ. ಈ ಕುರಿತು ಮಕ್ಕಳ ಕಲ್ಯಾಣ ಸಮಿತಿ ವಿಚಾರಣೆ ನಡೆಸಿದಾಗ ಮಗುವನ್ನು ಅಕ್ರಮವಾಗಿ ದತ್ತು ತೆಗೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಹಿನ್ನೆಲೆ ಎಫ್‍ಐಆರ್ ದಾಖಲಿಸಲು ಸೂಚನೆ ನೀಡಲಾಗಿದೆ.