ಚಿಕ್ಕಮಗಳೂರು: ಶಿಕ್ಷಣಕ್ಕಾಗಿ ಮಕ್ಕಳಿಗೆ ಮೊಬೈಲ್ ಕೊಡಿಸಿದ್ದೇ ಮುಳುವಾಗೋದಕ್ಕೆ ಕಾರಣವಾಗುತ್ತಿದ್ದು, ಕೆಲವು ಮಕ್ಕಳು ಅದರಲ್ಲೇ ಮುಳುಗಿದ್ದು ಅನಾಹುತಕ್ಕೆ ದಾರಿಯಾಗುತ್ತಿದೆ. ಫೆಬ್ರವರಿ ತಿಂಗಳ ಮೊದಲ 20 ದಿನಗಳಲ್ಲೇ ಜಿಲ್ಲೆಯಲ್ಲಿ ಎಂಟಕ್ಕೂ ಹೆಚ್ಚು ಪೋಕ್ಸೊ ಕೇಸ್‍ಗಳು ದಾಖಲಾಗಿವೆ. ಆ ಕೇಸ್‍ಗಳಿಗೆ ಮೊಬೈಲ್, ಸೋಶಿಯಲ್ ಮೀಡಿಯಾವೇ ಮೂಲ ಕಾರಣವೆಂದರೆ ನೀವು ನಂಬಲೇಬೇಕು. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಓದಿ: ಬೀದಿನಾಯಿಗೆ ಊಟ ಹಾಕುವ ವಿಚಾರಕ್ಕೆ ಗಲಾಟೆ: ಮಹಿಳಾ ಟೆಕ್ಕಿಗೆ ಚಪ್ಪಲಿಯಿಂದ ಹಲ್ಲೆ ಯತ್ನ
ಕಳೆದ 20 ದಿನದಲ್ಲಿ ಜಿಲ್ಲೆಯಲ್ಲಿ ಎಂಟು ಪೋಕ್ಸೊ ಕೇಸ್ ದಾಖಲಾಗಿದ್ದು, ಅದರಲ್ಲಿ ಎರಡು ಮಲೆನಾಡ ಭಾಗದ ಜನರು ಬೆಚ್ಚಿ ಬೀಳುವಂತಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಪೋಕ್ಸೊ ಕೇಸ್ ದಾಖಲಾದ ನಂತರ ಪೋಲಿಸರು ಎಫ್ಐಆರ್ ದಾಖಲಿಸಿ, ದೌರ್ಜನ್ಯಕ್ಕೆ ಒಳಗಾದವರನ್ನು ಮಾನಸಿಕ ತಜ್ಞರ ನೇತೃತ್ವದಲ್ಲಿ ತಪಾಸಣೆಗೆ ಒಳಪಡಿಸಿ ಕೌನ್ಸಿಲಿಂಗ್ ಮಾಡಿಸುತ್ತಾರೆ. ಆಗ ಹೊರಬೀಳೋ ಸತ್ಯಗಳು ವೈದ್ಯರಿಗೇ ಶಾಕ್ ನೀಡುವಂತಿದ್ದು, ಅತ್ಯಾಚಾರ ಪ್ರಕರಣಗಳಿಗೆ ಪ್ರಮುಖ ಕಾರಣ ಸಾಮಾಜಿಕ ಜಾಲ ತಾಣಗಳೇ ಎಂಬ ಆತಂಕಕಾರಿ ವಿಷಯ ಹೊರಬಿದ್ದಿದೆ.
ಪೋಷಕರು ಮಕ್ಕಳಿಗೆ ಮೊಬೈಲ್ ಕೊಡಿಸಿ ಅವರ ಬಗ್ಗೆ ಗಮನ ಹರಿಸಲ್ಲ ಎಂದು ವೈದ್ಯರು ಪೋಷಕರ ಬಗ್ಗೆಯೂ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಮಕ್ಕಳಿಗೆ ಮೊಬೈಲ್ ಕೊಡಿಸಿ ಅವರು ಏನು ಮಾಡುತ್ತಿದ್ದಾರೆ ಎಂದು ಅವರ ಚಲನವಲನಗಳ ಮೇಲೆ ನಿಗಾ ವಹಿಸಬೇಕು. ಆಗ ಇಂಥ ಅಚಾತುರ್ಯ ನಡೆಯುವುದಿಲ್ಲ. ಪೋಷಕರು ಎಚ್ಚರ ವಹಿಸಬೇಕು ಅನ್ನೋದು ವೈದ್ಯರ ಅಭಿಪ್ರಾಯವಾಗಿದೆ.
ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆ ಕೂಡ ಶಾಲಾ ಮಕ್ಕಳೊಂದಿಗೆ ಬೆರೆತು ನಾವು-ನೀವು ಸ್ನೇಹಿತರು ಎಂದೂ ಅಪ್ರಾಪ್ತರಿಗೆ ಅರಿವು ಮೂಡಿಸುತ್ತಿದ್ದಾರೆ. ಪೋಷಕರು ಮಕ್ಕಳ ಮೇಲೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಇನ್ನು ತಜ್ಞರ ತಂಡ ಕೂಡ ಅಪ್ರಾಪ್ತರ ಚಲನವಲನಗಳ ಬಗ್ಗೆ ಎಚ್ಚರಿಕೆ ವಹಿಸಿದರೆ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳಿಗೆ ಬ್ರೇಕ್ ಹಾಕಬಹುದಾಗಿದೆ.
ಒಟ್ಟಾರೆಯಾಗಿ, ಇಂತಹ ಬಹುತೇಕ ಪ್ರಕರಣಗಳಿಗೆ ಸೋಷಿಯಲ್ ಮೀಡಿಯಾಗಳೇ ಕಾರಣ ಅನ್ನೋ ಆಘಾತಕಾರಿ ಅಂಶ ಹೊರಬಿದ್ದಿರೋದು ಜನರಲ್ಲಿ ಇನ್ನಷ್ಟು ಅತಂಕ ಹುಟ್ಟಿಸಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಾದರೂ ಸಾಮಾಜಿಕ ಜಾಲತಾಣಗಳಿಂದ ಮಕ್ಕಳನ್ನು ದೂರ ಇಡುವ ಮಹತ್ವದ ಜವಾಬ್ದಾರಿ ಪಾಲಕರ ಮೇಲಿದೆ.