ಚಿಕ್ಕಮಗಳೂರು: ಯುಪಿಎಸ್ಸಿ ಪರೀಕ್ಷೆಯಲ್ಲಿ ಚಿಕ್ಕಮಗಳೂರಿನ ಯುವತಿ 71ನೇ ರ್‍ಯಾಂಕ್ ಪಡೆದು ಕೀರ್ತಿ ತಂದಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಬಾಣೂರು ಗ್ರಾಮದ ಯಶಸ್ವಿನಿ 71ನೇ ರ್‍ಯಾಂಕ್ ಪಡೆದ ಯುವತಿಯಾಗಿದ್ದು, ಕಳೆದ ಬಾರಿ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ 293ನೇ ರ್‍ಯಾಂಕ್ ಪಡೆದುಕೊಂಡಿದ್ದರು.
ಕಳೆದ ಬಾರಿಯ ರ್‍ಯಾಂಕ್ ಯಶಸ್ವಿನಿ ಅವರಿಗೆ ಸಮಾಧಾನ ನೀಡದ ಕಾರಣ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡು ದೇಶಕ್ಕೆ 71ನೇ ರ್‍ಯಾಂಕ್ ಬಂದಿದ್ದಾರೆ. ಯಶಸ್ವಿನಿ ಬಾಣೂರು ಗ್ರಾಮದ ಬಸವರಾಜಪ್ಪ-ಇಂದಿರಾ ದಂಪತಿಯ ಪುತ್ರಿಯಾಗಿದ್ದಾರೆ. ಇವರ ತಂದೆ ಬಸವರಾಜಪ್ಪ ಗುಬ್ಬಿ ಹಳ್ಳಿಯಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಯಶಸ್ವಿನಿ ಕಡೂರು ತಾಲೂಕಿನ ಗುಬ್ಬಿ ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಕಡೂರಿನ ದೀಕ್ಷಾ ವಿದ್ಯಾ ಮಂದಿರದಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ, ಶಿವಮೊಗ್ಗದಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದ್ದಾರೆ. ನಂತರ ಬೆಂಗಳೂರಿಗೆ ತೆರಳಿ ಆರ್ವಿ ಇಂಜನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ಸದ್ಯ ಯಶಸ್ವಿನಿ ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್ನಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.