ಚಿಕ್ಕಮಗಳೂರು : ಬಯಲುಸೀಮೆಯ ಶಾಶ್ವತ ಬರಪೀಡಿತ ಪ್ರದೇಶಗಳಿಗೆ ನಿರುಣಿಸುವ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಇತಿಹಾಸ ಪ್ರಸಿದ್ದ ಅಯ್ಯನಕೆರೆ ಮಳೆಗಾಲದಲ್ಲೇ ತುಂಬಿ ಕೋಡಿ ಬೀಳೋದು ತುಂಬಾ ಅಪರೂಪ. ಆದರೆ, ಈ ಸಾರಿ ಚಳಿಗಾಲದಲ್ಲೂ ಕೋಡಿ ಬಿದ್ದು ಇಲ್ಲಿನ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಇತ್ತೀಚಿನ ವರ್ಷಗಳಲ್ಲೇ ಈ ಕೆರೆ ವರ್ಷಪೂರ್ತಿ ತುಂಬಿರಲಿಲ್ಲ. 2,036 ಹೆಕ್ಟೇರ್ ಪ್ರದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿರೋ ಈ ಕೆರೆ, 5-6 ಸಾವಿರ ಹೆಕ್ಟೇರ್ಗೆ ನೀರಾವರಿ ಸೌಲಭ್ಯದ ಜೀವನಾಡಿ. ಈ ಕೆರೆ ತುಂಬಿದರೆ ಲಕ್ಷಾಂತರ ರೈತರ ಬದುಕು ಹಸನಾಗುತ್ತದೆ.
ಕಳೆದೆರಡು ವಾರಗಳಿಂದ ನಿರಂತರ ಮಳೆ ಹಿನ್ನೆಲೆ ಈ ಕೆರೆ ಈ ವರ್ಷ ಎರಡನೇ ಬಾರಿ ತುಂಬಿದೆ. ಕಳೆದ ಬಾರಿಯೂ ಕೋಡಿ ಬಿದ್ದು ಜನ-ಜಾನುವಾರುಗಳ ನೀರಿನ ದಾಹ ತಣಿಸಿತ್ತು. ಇದೀಗ ಮತ್ತೆ ಅಂದಾಜು 70 ವರ್ಷಗಳ ಬಳಿಕ ಚಳಿಗಾಲದಲ್ಲೂ ಕೋಡಿ ಬಿದ್ದಿರೋದು ರೈತರಿಗೆ ಡಬಲ್ ಖುಷಿ.
70 ವರ್ಷದ ಸ್ಥಳೀಯ ರೈತರೊಬ್ಬರು ಈ ಬಗ್ಗೆ ಮಾತನಾಡಿದ್ದು, ನನ್ನ ಜೀವನದಲ್ಲೇ ನವೆಂಬರ್ನಲ್ಲಿ ಕೆರೆ ಕೋಡಿ ಬಿದ್ದಿರೋದು ನೋಡಿಲ್ಲ. ಇಲ್ಲಿ ಹರಿಯೋ ನೀರು ಕಡೂರಿನ ಬಹುತೇಕ ಭಾಗಕ್ಕೆ ಕುಡಿಯೋ ನೀರಿನ ಸೌಲಭ್ಯ ಕಲ್ಪಿಸಿದೆ.
ಇಲ್ಲಿನ ಊರು ಕಾಲುವೆ, ಬಸವನ ಕಾಲುವೆ, ಕಡೇ ಕಾಲುವೆ, ಗೌರಿ ಹಳ್ಳಿ ನಾಲ್ಕು ಕಾಲುವೆಗಳಾಗಿ ಹರಿಯೋ ನೀರು ಲಕ್ಷಾಂತರ ಜನರಿಗೆ ಬದುಕುವ ಚೈತನ್ಯ ತಂದಿದೆ. ಸದ್ಯ ಏಳು ಗುಡ್ಡಗಳ ಮಧ್ಯೆ ಇರೋ ಈ ಕೆರೆಯ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ.
ಹಸಿರ ನೀರಿನ ಸೌಂದರ್ಯವನ್ನ ಸವಿಯಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಚಂದ್ರದ್ರೋಣ ಪರ್ವತ ಶ್ರೇಣಿಗೆ ಭೇಟಿ ನೀಡೋ ಪ್ರವಾಸಿಗರು, ಅಯ್ಯನಕೆರೆ ಕೋಡಿ ಬಿದ್ದಿರೋದನ್ನ ಕೇಳಿ ಇಲ್ಲಿಗೂ ವಿಸಿಟ್ ಕೊಡುತ್ತಿದ್ದಾರೆ. ಸೆಲ್ಪಿ ತೆಗೆದುಕೊಂಡು, ಫೋಟೋ ಕ್ಲಿಕ್ಕಿಸಿಕೊಂಡು ಅಯ್ಯನಕೆರೆ ಸೌಂದರ್ಯವನ್ನ ಸವಿಯುತ್ತಿದ್ದಾರೆ.
ಇದನ್ನೂ ಓದಿ: ರಸ್ತೆ ಅಪಘಾತ : ಚಿಕ್ಕಮಗಳೂರಿನಲ್ಲಿ ಇಬ್ಬರು ಬೈಕ್ ಸವಾರರು ಸಾವು