ಚಿಕ್ಕಮಗಳೂರು: ಕಾಫಿನಾಡಿನ ಭೂಮಿ ಭೂಲೋಕದ ತೋಟವೆಂದರೆ ತಪ್ಪಿಲ್ಲ. ಇಲ್ಲಿ ಚಳಿಗಾಲದ ವಿಶೇಷ ಅತಿಥಿ ಅಂದರೆ ಅದುವೇ ಕಾಡು ಮಲ್ಲಿಗೆ. ಇತರೆ ಪುಪ್ಪಗಳಿಗಿಂತ ತಾನೇನೂ ಕಮ್ಮಿಯಿಲ್ಲವೆಂಬಂತೆ ಇದು ಕೂಡ ತನ್ನ ಸೊಬಗಿನ ಜೊತೆ ಸುವಾಸನೆಯನ್ನೂ ಬೀರುತ್ತದೆ. ಹಾಲಿನ ನೊರೆಯಂತೆ ಹೊಳೆಯುವ ಈ ಹೂವು ವರ್ಷದ ಒಂದು ತಿಂಗಳು ಮಾತ್ರ ಕಾಣಲು ಸಾಧ್ಯ.
ಮಲೆನಾಡಿನ ದಟ್ಟಾರಣ್ಯದಲ್ಲಿ ಸಿಗುವ ಈ ಬಿಳಿ ಕಾಡು ಮಲ್ಲಿಗೆ, ಚಳಿಗಾಲದಲ್ಲಿ ಮಾತ್ರ ಅರಳಿ ಜನರನ್ನು ಆಕರ್ಷಿಸುತ್ತದೆ. ಕಾಫಿ ತೋಟಗಳ ನಡುವೆ ಅರಳೋ ಈ ಕಾಡು ಮಲ್ಲಿಗೆ ಎಲ್ಲಾ ಋತುವಿನಲ್ಲೂ ಅರಳುವುದಿಲ್ಲ. ಡಿಸೆಂಬರ್ನಲ್ಲಿ ಮಾತ್ರ ಇದರ ಜನನ. ಪ್ರವಾಸಿಗರಿಗೆ, ದಾರಿಹೋಕರಿಗೆ, ಸೌಂದರ್ಯ ಪ್ರಿಯರ ಮನಸ್ಸಿಗೆ ಈ ಕಾಡು ಮಲ್ಲಿಗೆ ಮುದ ನೀಡುತ್ತದೆ. ಈ ಹೂವನ್ನು ಮದ್ರಾಸಿ ಹೂವು ಅಂತಲೂ ಕೆಲವರು ಕರೆಯುತ್ತಾರೆ.
ಓದಿ: ಮಣ್ಣಿಲ್ಲದೇ ಸಸ್ಯ ಬೆಳೆದ ಇಂಜಿನಿಯರ್: ಪಾಲಿಹೌಸ್ ನಿರ್ಮಿಸುವ ಮೂಲಕ ರೈತರಿಗೆ ಸಹಾಯ
ಚಿಕ್ಕಮಗಳೂರಿನ ಹಿರೇಕೊಳಲೆ, ಕೈಮರ, ಮಲ್ಲೇನಹಳ್ಳಿ, ಹೊಸಪೇಟೆ ಭಾಗದಲ್ಲಿ ಹೆಚ್ಚಾಗಿ ಕಾಣುವ ಈ ಕಾಡು ಮಲ್ಲಿಗೆ, ಹಾಲ್ನೋರೆಯ ಬೆಳ್ಳನೆ ರಾಶಿಯಂತಿದೆ. ಈ ಹೂ ಮಲ್ಲಿಗೆಯಂತೆ ಕಂಡುಬಂದರೂ ಕೂಡ ಇದು ಮಲ್ಲಿಗೆಯಲ್ಲ. ಸಾವಿರಾರು ಸಂಖ್ಯೆಯಲ್ಲಿ ದಟ್ಟವಾಗಿ ಬೆಳೆದು ನಿಂತಿದ್ದರೂ ಪೂಜೆಗೂ ಬಳಸಲ್ಲ.
ಈ ಕಾಡು ಮಲ್ಲಿಗೆ ನಿತ್ಯ ಬಳಕೆಯ ಪುಪ್ಪಗಳಂತಲ್ಲ. ಈ ಹೂವನ್ನು ಯಾವುದೇ ಅಲಂಕಾರಕ್ಕೆ ಬಳಸಲ್ಲ. ಹೆಣ್ಣು ಮಕ್ಕಳು ಮುಡಿಯೋದೂ ಇಲ್ಲ. ಬೆಳಗ್ಗೆ ಅರಳಿ ಸಂಜೆ ಬಾಡೋ ಈ ಕಾಡು ಮಲ್ಲಿಗೆಯ ಜೀವಿತಾವಧಿ ಒಂದು ದಿನ ಮಾತ್ರ.