ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದು ಮಿಂಚಿದ್ದಾರೆ. ಭಂಡಿಗಡಿ ಸಮೀಪದ ಸಕ್ರೇಬೈಲು ಎಂಬ ಕುಗ್ರಾಮದ ಕೃಷಿಕ ಕುಟುಂಬದ ಆಕೃತಿ ಎಸ್.ಎಸ್ ಹಾಗೂ ಆಲ್ದೂರಿನ ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿನಿ ಚೈತ್ರಾ ಎಂ.ಗೌಡ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸತೀಶ್ ಮತ್ತು ನಯನ ದಂಪತಿ ಪುತ್ರಿಯಾಗಿರುವ ಆಕೃತಿ ಕೊಪ್ಪ ತಾಲೂಕಿನ ಕಮ್ಮರಡಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ಧಾರೆ. ತಮ್ಮ ಸಾಧನೆ ಬಗ್ಗೆ 'ಈಟಿವಿ ಭಾರತ' ಜೊತೆ ಮಾತನಾಡಿದ ಅವರು, ಪಾಲಕರ, ಶಿಕ್ಷಕರ ಓದಿಗೆ ಹೆಚ್ಚಾಗಿ ಸಹಕಾರ ನೀಡುತ್ತಿದ್ದರು. ಎಲ್ಲ ವಿದ್ಯಾರ್ಥಿಗಳಂತೆಯೇ ಓದುತ್ತಿದ್ದೆ. ಪರೀಕ್ಷೆಯಲ್ಲಿ ಪೂರ್ಣ ಅಂಕವನ್ನು ಪಡೆದಿರುವುದಕ್ಕೆ ಸಂತೋಷವಾಗಿದೆ. ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ದುಕೊಳ್ಳುತ್ತೇನೆ, ಉಪನ್ಯಾಸಕಿ ಆಗಬೇಕು ಎಂಬ ಕನಸು ಕಂಡಿದ್ದೇನೆ ಎಂದು ತಿಳಿಸಿದರು.
ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಶ್ರೀಧರ್ ಮಾತನಾಡಿ, ಶಾಲೆ ಆರಂಭವಾಗಿ 50 ವರ್ಷ ಕಳೆದಿದೆ. ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿ ಟಾಪರ್ ಆಗಿ ಹೊರಹೊಮ್ಮಿರುವುದು ಸಂತಸವಾಗಿದೆ. ವಿದ್ಯಾರ್ಥಿನಿಯ ಪಾಲಕರಿಗೆ ಹಾಗೂ ವಿದ್ಯಾರ್ಥಿನಿಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದದ ಪರವಾಗಿ ಅಭಿನಂದನೆ ತಿಳಿಸುತ್ತೇನೆ. ಆಕೆಯ ಮುಂದಿನ ಜೀವನ ಉತ್ತುಂಗಕ್ಕೇರಲಿ ಎಂದು ಹಾರೈಸಿದರು.
ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಿದ್ದ ದಿನವೇ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ