ಚಿಕ್ಕಮಗಳೂರು : ನಗರದಲ್ಲಿ ದರೋಡೆ ಮಾಡಿ ತಪ್ಪಿಸಿಕೊಂಡು ಹೋಗುವ ವೇಳೆ ಇಬ್ಬರು ಕಳ್ಳರನ್ನು ಅಗ್ನಿಶಾಮಕ ವಾಹನ ಚಾಲಕ ಸಮಯ ಪ್ರಜ್ಞೆಯಿಂದ ಸೆರೆ ಹಿಡಿದ ವಿಡಿಯೋ ಒಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ 4 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದರೋಡೆ ನಡೆಸಿ ತಪ್ಪಿಸಿಕೊಂಡು ಹೋಗುತ್ತಿದ್ದ ಇಬ್ಬರನ್ನು ಸ್ಥಳೀಯರು ಸೆರೆ ಹಿಡಿದು ಪೋಲಿಸರಿಗೆ ಒಪ್ಪಿಸಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ದರೋಡೆಕೋರರ ತಂಡದಲ್ಲಿ ಇದ್ದದ್ದು ಇಬ್ಬರು ಮಾತ್ರ ಅಲ್ಲ, ಒಟ್ಟು 6 ಜನ ಇದ್ದರು ಎಂಬ ವಿಷಯ ಗೊತ್ತಾಗಿತ್ತು. ಇದೀಗ ಇನ್ನುಳಿದ ನಾಲ್ವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಪ್ರಕರಣದ ವಿವರ : ಫೆಬ್ರವರಿ 27 ರಂದು ಚಿಕ್ಕಮಗಳೂರಿನ ಎಐಟಿ ಸರ್ಕಲ್ ಬಳಿಯ ಕಲ್ಯಾಣನಗರದ ಚಂದ್ರೇಗೌಡ ಎಂಬವರ ಮನೆಯಲ್ಲಿ ನಡೆದ ದರೋಡೆ ಪ್ರಕರಣ ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು. ದರೋಡೆ ಮಾಡಿ ಬೈಕ್ನಲ್ಲಿ ಎಸ್ಕೇಪ್ ಆಗುವಾಗ ಇಬ್ಬರು ದರೋಡೆಕೋರರನ್ನು ಅಗ್ನಿಶಾಮಕ ದಳದ ವಾಹನ ಚಾಲಕ ಅಡ್ಡಗಟ್ಟಿದ್ದ. ದರೋಡೆಕೋರರು ಚಂದ್ರೇಗೌಡರ ಪತ್ನಿ ಸರೋಜಮ್ಮ ಎಂಬವರನ್ನು ಮನೆಯಲ್ಲಿ ಕಟ್ಟಿಹಾಕಿ ಚಿನ್ನಾಭರಣ, ನಗದು ದೋಚಿ ಎಸ್ಕೇಪ್ ಆಗಲು ಮುಂದಾಗಿದ್ದರು. ಈ ವೇಳೆ ಇಬ್ಬರು ದರೋಡೆಕೋರರಾದ ಸಚಿನ್, ಮೋಹನ್ ಇವರನ್ನು ಅಗ್ನಿಶಾಮಕ ದಳದ ವಾಹನ ಚಾಲಕ ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದ. ಬಳಿಕ ಪ್ರಕರಣ ತನಿಖೆ ನಡೆಸಿದ ಪೊಲೀಸರು, ಖದೀಮರ ತಂಡ ಇತರ ಸದಸ್ಯರಾದ ಸಂದೀಪ್, ಲೋಹಿತ್, ವರ್ನಲ್, ಗೌತಮ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಒಟ್ಟು 6 ಜನ ಆರೋಪಿಗಳ ಬಂಧನವಾಗಿದೆ.
ಓದಿ : ಶಂಕರ್ ಬಿದರಿ ಇಮೇಲ್ ಖಾತೆ ಹ್ಯಾಕ್ ಮಾಡಿದ ಖದೀಮರು ಅರೆಸ್ಟ್!
ಬಂಧಿತರ ಪೈಕಿ ಸಂದೀಪ್ ಎಂಬಾತ ಚಂದ್ರೇಗೌಡರ ಸ್ವಂತ ತಂಗಿಯ ಮಗ. ಈತನೇ ಈ ಕಳ್ಳತನದ ಹಿಂದಿನ ಮಾಸ್ಟರ್ ಮೈಂಡ್ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ದರೋಡೆ ನಡೆಯುವ ಕೆಲ ದಿನಗಳ ಹಿಂದೆ 2 ಗುಂಟೆ ಜಮೀನನ್ನು ಚಂದ್ರೇಗೌಡರು ಮಾರಾಟ ಮಾಡಿದ್ದರು. ಮಾರಾಟವಾಗಿದ್ದ ಜಮೀನಿನ 35 ಲಕ್ಷ ರೂ. ಹಣವನ್ನು ಚಂದ್ರೇಗೌಡರು ಸಂದೀಪ್ ಜೊತೆಗೆ ಹೋಗಿ ತೆಗೆದುಕೊಂಡು ಬಂದಿದ್ದರು. ಈ ಹಣವನ್ನು ಹೇಗಾದರೂ ಮಾಡಿ ಕಳ್ಳತನ ಮಾಡಬೇಕು ಎಂದು ಪ್ಲಾನ್ ಮಾಡಿದ ಸಂದೀಪ್, ಒಂದು ತಂಡ ರಚನೆ ಮಾಡಿ ಮೋಹನ್, ಲೋಹಿತ್, ವರ್ನಲ್, ಗೌತಮ್, ಸಚಿನ್ ಎಂಬವರನ್ನು ಸೇರಿಸಿಕೊಂಡು ಯಾವ ರೀತಿ ದರೋಡೆ ಮಾಡಬೇಕು ಯೋಜನೆ ರೂಪಿಸಿದ್ದರು. ಅದರಂತೆ ನಂಬರ್ ಪ್ಲೇಟ್ ಇಲ್ಲದ ಬೈಕ್ ಒಂದನ್ನು ರೆಡಿ ಮಾಡಿಕೊಂಡು ದರೋಡೆಗೆ ಇಳಿದಿದ್ದರು. ಆದರೆ ಇವರ ಅದೃಷ್ಟ ಕೈ ಕೊಟ್ಟು ಎಲ್ಲರೂ ಪೊಲೀಸರ ಅತಿಥಿಯಾಗಿದ್ದಾರೆ.