ಚಿಕ್ಕಮಗಳೂರು : ಕೊರೊನಾ ವೈರಸ್ ಭೀತಿಯಿಂದ ಇಡೀ ಭಾರತವೇ ಲಾಕ್ಡೌನ್ ಆಗಿದೆ. ಸಾರ್ವಜನಿಕರಿಗೆ ಅವಶ್ಯಕವಾಗಿ ಬೇಕಾಗಿರುವ ಕೆಲ ಅಂಗಡಿಗಳನ್ನು ತೆರೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇತ್ತ ಬಾರ್ಗಳನ್ನು ಕ್ಲೋಸ್ ಮಾಡಿರುವ ಕಾರಣ ಕೆಲ ಕುಡುಕರು ಅಡ್ಡ ದಾರಿ ಹಿಡಿಯೋದಕ್ಕೆ ಪ್ರಾರಂಭ ಮಾಡಿದ್ದಾರೆ.
ಬಾರ್ ಕ್ಲೋಸ್ ಆಗಿ ಮದ್ಯ ಸಿಗದಿದ್ದರೇ ಏನು, ನಾವೇ ಕಳ್ಳ ಭಟ್ಟಿ ತಯಾರು ಮಾಡುತ್ತೇವೆ ಎಂದು ಚಿಕ್ಕಮಗಳೂರು ಜಿಲ್ಲೆಯ ಜನ ಮುಂದಾಗಿದ್ದಾರೆ. ಕಳ್ಳ ಭಟ್ಟಿ ತಯಾರು ಮಾಡುತ್ತಿದ್ದ ಜಾಗದ ಮೇಲೆ ಚಿಕ್ಕಮಗಳೂರು ಪೊಲೀಸರು ದಾಳಿ ಮಾಡಿ ಕಳ್ಳ ಭಟ್ಟಿಯನ್ನು ತಯಾರು ಮಾಡುತ್ತಿದ್ದ ಜನರಿಂದಲೇ ಅದನ್ನು ನಾಶ ಮಾಡಿಸಿದ್ದಾರೆ.
ಈ ವೇಳೆ ಕಳ್ಳ ಭಟ್ಟಿ ಕಾಯಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ಮನೆಯಲ್ಲೇ ಕಳ್ಳಭಟ್ಟಿ ಕಾಯಿಸುತ್ತಿದ್ದ ವೇಳೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದಾರೆ. ಕಳ್ಳ ಭಟ್ಟಿಯನ್ನ ಮನೆಯ ಮುಂದೆಯೇ ತಯಾರು ಮಾಡಿದ್ದವರಿಂದಲೇ ಅದನ್ನ ನಾಶಪಡಿಸಿದ್ದಲ್ಲದೇ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಣಕಲ್ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.