ಚಿಕ್ಕಮಗಳೂರು: ಕಾಫಿನಾಡಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಈ ಮಧ್ಯೆ ಜೀವ ಭಯದಿಂದ ವ್ಯಾಕ್ಸಿನ್ ಪಡೆಯುವವರ ಸಂಖ್ಯೆಯೂ ಅಷ್ಟೇ ಗಣನೀಯವಾಗಿ ಏರಿಕೆಯಾಗ್ತಿದೆ. ಆರಂಭದ ದಿನಗಳಲ್ಲಿ ವ್ಯಾಕ್ಸಿನ್ ಹಂಚಿಕೆಯಲ್ಲಿ ಸರ್ಕಾರದ ಟಾರ್ಗೆಟ್ ರೀಚ್ ಮಾಡಲು ಸಾಧ್ಯವಾಗ್ತಿರಲಿಲ್ಲ. ಆದರೆ, ಎರಡನೇ ಕೊರೊನಾ ಅಲೆಗೆ ಬೆದರಿರುವ ಕಾಫಿನಾಡಿಗರು ವ್ಯಾಕ್ಸಿನ್ ಪಡೆಯಲು ದಿಢೀರ್ ಅಂತ ಮುಂದೆ ಬಂದಿದ್ದಾರೆ. ಇದೀಗ, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಸಮಯದಲ್ಲಿ ವ್ಯಾಕ್ಸಿನ್ ಪಡೆಯುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ.
ಆರಂಭದಲ್ಲಿ 15-30 ಕೇಸ್ ಬಂದಾಗ ಕೊರೊನಾ ಭಯವಿಲ್ಲದೆ, ಮಾಸ್ಕ್, ಸಾಮಾಜಿಕ ಅಂತರ ಮರೆತು ಜನರು ಬೇಕಾಬಿಟ್ಟಿಯಾಗಿ ತಿರುಗಾಡಿದ್ದಾರೆ. ಆರಂಭದಲ್ಲಿ ವ್ಯಾಕ್ಸಿನ್ ಪಡೆಯಿರಿ ಎಂದರೆ ಜ್ವರ ಬರುತ್ತದೆ ಎಂದು ದೂರ ತೆರಳಿದ್ದರು. ಆದರೆ ಈಗ ಎಲ್ಲರಿಗೂ ಪೀಕಲಾಟ ಶುರುವಾಗಿದೆ. ಪ್ರತಿ ದಿನ 100ರ ಮೇಲೆಯೇ ಕೇಸುಗಳು ಬರುತ್ತಿದ್ದು, ಇದನ್ನು ಕಂಡ ಜನರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೂ ಮೊದಲ ಹಂತದಲ್ಲಿ 1,67,461 ಮಂದಿಗೆ ಲಸಿಕೆ ನೀಡಲಾಗಿದೆ. ಎರಡನೇ ಹಂತದಲ್ಲಿ 1,87,557 ಮಂದಿಗೆ ಲಸಿಕೆ ನೀಡಿದ್ದು, ಜಿಲ್ಲೆಯಲ್ಲಿ ಲಸಿಕೆ ತೆಗೆದುಕೊಂಡವರಲ್ಲಿ 33 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಆದರೆ ಶೇಕಡವಾರು ಲಸಿಕೆ ಪಡೆದವರಲ್ಲಿ ಕೋವಿಡ್ ಬರುವುದು ತುಂಬಾ ಕಡಿಮೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಇದೀಗ ಪ್ರತಿದಿನ 6 ಸಾವಿರದಿಂದ 7 ಸಾವಿರ ಲಸಿಕೆ ನೀಡುತ್ತಿದ್ದು, ಕೊರೊನಾ ಲಸಿಕೆ ಪಡೆಯಲು ಜನ ಕೂಡ ಮುಂದೆ ಬರುತ್ತಿದ್ದಾರೆ.