ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಎರಡು ದಿನಗಳಿಂದ ಹಳ್ಳಿಗಳು ಕತ್ತಲಲ್ಲಿ ಮುಳುಗಿವೆ. ಬಿಡುವಿಲ್ಲದೆ ಸುರಿಯುತ್ತಿರೋ ಮಳೆಯಿಂದ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರವಾಗಿ ಧಾರಾಕಾರ ಮಳೆ ಮುಂದುವರೆದಿದ್ದು, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ದೋಬಿ ಹಳ್ಳದ ಪಕ್ಕದಲ್ಲಿರವ ಅಡಿಕೆ ತೋಟ ಜಲಾವೃತವಾಗಿದೆ. ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ದೋಬಿ ಹಳ್ಳದ ಹರಿವಿನಲ್ಲಿಯೂ ಏರಿಕೆಯಾಗಿದೆ. ಈ ನೀರು ಭದ್ರಾ ನದಿಗೆ ಸೇರುತ್ತದೆ.
ಇಲ್ಲಿನ ಚಾರ್ಮಾಡಿ ಘಾಟಿಯ ಏಳನೇ ತಿರುವಿನಲ್ಲಿ ಬೃಹತ್ ಗಾತ್ರದ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರಿಂದ 2 ಕೀ.ಮೀ.ವರಗೂ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನ ಸವಾರರು ಪರದಾಡುವಂತಾಗಿದೆ. ಇತ್ತ ಮರ ಬಿದ್ದು ಗಂಟೆಯಾದರೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬರದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕೊನೆಗೆ ವಾಹನ ಸವಾರರೇ ಮರ ತೆರವಿನ ಕಾರ್ಯಾಚರಣೆ ಕೈಗೊಂಡರು.
ಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ಸದ್ಯ ಸೇತುವೆ ಮುಳುಗಡೆಯಾಗಲು ಒಂದು ಅಡಿ ಮಾತ್ರ ಬಾಕಿ ಇದೆ. ಶೃಂಗೇರಿ ದೇಗುಲದ ಪಕ್ಕದಲ್ಲಿರುವ ಕಪ್ಪೆ ಶಂಕರ ದೇವಾಲಯ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ. ಶಾರದಾಂಬೆ ಮಠದ ಪಕ್ಕದಲ್ಲಿಯೇ ಈ ದೇವಸ್ಥಾನ ಇದೆ. ನೀರಿನ ಹರಿವು ಹೆಚ್ಚಾಗುತ್ತಲೇ ಇದೆ. ಮಳೆ ಹೀಗೆಯೇ ಮುಂದುವರೆದರೆ ಮಠದ ಆವರಣದ ಪಕ್ಕದಲ್ಲಿರುವ ಗಾಂಧಿ ಮೈದಾನಕ್ಕೂ ನೀರು ನುಗ್ಗುವ ಸಾಧ್ಯತೆ ಇದೆ.