ಚಿಕ್ಕಮಗಳೂರು : ರಾಜ್ಯದ ನಾನಾ ಕಡೆಗಳಿಂದ ಬಂದಿದ್ದ ಭಕ್ತರು ದತ್ತಾತ್ರೇಯನ ದರ್ಶನ ಪಡೆಯುವ ಮೂಲಕ ಈ ವರ್ಷದ ದತ್ತ ಜಯಂತಿಗೆ ವಿದ್ಯುಕ್ತ ತೆರೆ ಬಿದ್ದಿದೆ. ನಿನ್ನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದ್ದ ಬೃಹತ್ ಶೋಭಾಯಾತ್ರೆಯಲ್ಲಿ ಕುಣಿದು ಕುಪ್ಪಳಿಸಿದ ಜನರು, ಶ್ರದ್ಧಾ ಭಕ್ತಿಯಿಂದ ಮೈ ಕೊರೆಯುವ ಚಳಿಯನ್ನ ಲೆಕ್ಕಿಸದೇ ದತ್ತಪೀಠಕ್ಕೆ ತೆರಳಿ ದತ್ತಾತ್ರೇಯ ಪಾದುಕೆ ದರ್ಶನ ಪಡೆದು ಪುನೀತರಾದ್ರು.
ಕಳೆದ 11 ದಿನಗಳಿಂದ ನಡೆಯುತ್ತಿದ್ದ ದತ್ತಜಯಂತಿಗೆ ತೆರೆ ಬಿದ್ದಿದೆ. ಭಾನುವಾರ ಬೆಳಗ್ಗೆ 8 ಗಂಟೆಯಿಂದಲೇ ದತ್ತಾತ್ರೇಯನ ದರ್ಶನ ಪಡೆದ ಭಕ್ತರು ರಾತ್ರಿ 7 ಗಂಟೆವರೆಗೂ ಜೈಕಾರ ಹಾಕುತ್ತ ದತ್ತ ಪೀಠದ ಕಡೆಗೆ ಬರುತ್ತಿದ್ರು.
ದತ್ತ ಜಯಂತಿಯ 2 ನೇ ದಿನವಾದ ಭಾನುವಾರ ರಾತ್ರಿ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಸಲಾಯ್ತು. ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಸಾಗಿದ ಶೋಭಾಯಾತ್ರೆ ಆಜಾದ್ ವೃತ್ತದಲ್ಲಿ ಕೊನೆಗೊಂಡಿತು. ಯಾತ್ರೆಯಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ದತ್ತ ಭಕ್ತರು ಪಾಲ್ಗೊಂಡಿದ್ರು. ಶಾಸಕ ಸಿ.ಟಿ. ರವಿ ನೃತ್ಯ ಮಾಡಿ ಸೊಂಟಕ್ಕೆ ನಂದಿಧ್ವಜ ಕಟ್ಟಿಕೊಂಡು ಕುಣಿದು ಎಲ್ಲರ ಗಮನ ಸೆಳೆದರು.
ಶೋಭಾಯಾತ್ರೆಯ ಉದ್ದಗಲಕ್ಕೂ ಕೇಸರಿಯ ಬಾವುಟಗಳು ರಾರಾಜಿಸಿದ್ವು. ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಸಾಗುವ ವೇಳೆ ಕಟ್ಟಡಗಳ ಮೇಲೆ ಸಾವಿರಾರು ಮಹಿಳೆಯರು ನಿಂತು ಶೋಭಾ ಯಾತ್ರೆಯನ್ನ ಕಣ್ತುಂಬಿಕೊಂಡ್ರು. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದ ಜನಸ್ತೋಮ ಕಂಡು ಕಾಫಿನಾಡಿಗರೇ ದಂಗಾದ್ರು.
ಇನಾಂ ದತ್ತಾತ್ರೇಯ ಪೀಠ ಹಿಂದೂ-ಮುಸ್ಲಿಂ ಸೂಕ್ಷ್ಮ ಕೇಂದ್ರವಾಗಿರೋದ್ರಿಂದ ಖಾಕಿ ಪಡೆ ಎಲ್ಲೆಡೆ ಹದ್ದಿನ ಕಣ್ಣನ್ನ ಇಟ್ಟಿತ್ತು. ಕಳೆದ ಮೂರು ದಿನಗಳಿಂದ ಹಗಲು ರಾತ್ರಿ ಎನ್ನದೇ ಮೂರು ಸಾವಿರಕ್ಕೂ ಅಧಿಕ ಪೊಲೀಸರು ಕಾಫಿನಾಡಿನ ಮೇಲೆ ಕಣ್ಗಾವಲಿಟ್ಟಿದ್ರು. ಸದ್ಯ ಶಾಂತಿಯುತವಾಗಿ ದತ್ತ ಜಯಂತಿ ಮುಗಿದಿರೋದು ಖಾಕಿ ಜೊತೆಗೆ ಕಾಫಿನಾಡಿನ ಮಂದಿಗೂ ನೆಮ್ಮದಿ ತರಿಸಿದೆ.