ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿಗೆ ಓರ್ವ ವೃದ್ಧೆ ಬಲಿಯಾಗಿದ್ದಾರೆ.
ಕೊಪ್ಪ ತಾಲೂಕಿನ ನಿವಾಸಿ 70 ವರ್ಷದ ವೃದ್ಧೆ ಕೋವಿಡ್ ಪಾಸಿಟಿವ್ ಬಂದಿದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕಿತ ವೃದ್ಧೆ ತೀವ್ರ ಉಸಿರಾಟದ ತೊಂದರೆ, ಅಸ್ತಮಾ, ಬಿಪಿ, ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ಗೆ ಬಲಿಯಾದವರ ಸಂಖ್ಯೆ ಎಂಟಕ್ಕೇರಿದೆ.
ಕಳೆದ ಕೆಲ ದಿನಗಳ ಹಿಂದೆ ತರೀಕೆರೆ ತಾಲೂಕಿನ ಅಜ್ಜಂಪುರದಲ್ಲಿ ಓರ್ವ ವೃದ್ಧೆ, ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯ ಓರ್ವ ವ್ಯಕ್ತಿ, ಉಪ್ಪಳ್ಳಿ ಮಹಿಳೆ ಹಾಗೂ ಪುರುಷ, ನಗರದ ರಾಮನ ಹಳ್ಳಿಯ ವೃದ್ಧೆ, ಗೌರಿ ಕಾಲುವೆಯ 52 ವರ್ಷದ ಪುರುಷ ಸೋಂಕಿಗೆ ಬಲಿಯಾಗಿದ್ದರು.
ಇದುವರೆಗೆ ನಗರದಲ್ಲಿ ಆರು ಜನ, ತರೀಕೆರೆ ತಾಲೂಕಿನ ಅಜ್ಜಂಪುರದಲ್ಲಿ ಒಬ್ಬರು ಹಾಗೂ ಕೊಪ್ಪ ತಾಲೂಕಿನಲ್ಲಿ ಓರ್ವ ವೃದ್ಧೆ ಮೃತಪಟ್ಟಿದ್ದಾರೆ. ಇಂದು ಮೃತಪಟ್ಟಿರುವ ವೃದ್ಧೆಯ ಹೆಣ್ಣು ಮಕ್ಕಳು ಹಾಗೂ ಅಳಿಯಂದಿರಿಗೆ ಸೋಂಕು ತಗುಲಿದ್ದು, ಎಲ್ಲರನ್ನೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.