ಚಿಕ್ಕಮಗಳೂರು : ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ವಿರುದ್ಧ ಜೆಡಿಎಸ್ ಬೆಂಬಲದೊಂದಿಗೆ ಸ್ವಪಕ್ಷೀಯ ಬಿಜೆಪಿ ಸದಸ್ಯರು ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದೆ. ಇದರಿಂದಾಗಿ ಬಿಜೆಪಿಗೆ ಭಾರಿ ಮುಖಭಂಗ ಉಂಟಾಗಿದೆ. ಅಧ್ಯಕ್ಷ ಸ್ಥಾನ ಸಂಬಂಧ ಚಿಕ್ಕಮಗಳೂರು ನಗರಸಭೆಯಲ್ಲಿ ಕಳೆದ ಎರಡು ತಿಂಗಳಿನಿಂದ ಹೈಡ್ರಾಮ ನಡೆಯುತ್ತಲೇ ಇತ್ತು. ಈ ಹಿನ್ನೆಲೆ ತಮ್ಮ ಪಕ್ಷದ ಅಧ್ಯಕ್ಷರ ವಿರುದ್ಧವೇ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮುಂದಾಗಿತ್ತು. ಶುಕ್ರವಾರ ನಡೆದ ಅವಿಶ್ವಾಸ ಮಂಡನೆಯನ್ನು ಬಿಜೆಪಿಗೆ ಸೋಲಾಗಿದೆ.
ಅವಿಶ್ವಾಸ ನಿರ್ಣಯದಲ್ಲಿ ಬಿಜೆಪಿಗೆ ಸೋಲು : ನಗರಸಭೆ ಹಾಲಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಾಮಾನ್ಯ ಸಭೆ ಕರೆಯಲಾಗಿತ್ತು. ಸಾಮಾನ್ಯ ಸಭೆಯಲ್ಲಿ ವಿವಿಧ ಪಕ್ಷದ ಸದಸ್ಯರು ಭಾಗವಹಿಸಿದ್ದರು. ಈ ವೇಳೆ ಅಧ್ಯಕ್ಷರು ಯಾವುದೇ ಚರ್ಚೆಗೆ ಅವಕಾಶ ನೀಡದೆ, ಅವಿಶ್ವಾಸ ನಿರ್ಣಯ ಪರ ಇರುವವರು ಕೈ ಎತ್ತುವಂತೆ ಸೂಚನೆ ನೀಡಿದರು. ಆಗ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷರು ಮತ್ತು ಆಯುಕ್ತರು ಅವಕಾಶ ನೀಡದೆ ನೇರ ಮತದಾನ ಪ್ರಕ್ರಿಯೆಗೆ ಸೂಚನೆ ನೀಡಿದರು.
ಈ ಹಂತದಲ್ಲಿ ಬಿಜೆಪಿ ಸದಸ್ಯರು ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದಾಗ ಸಭೆಯಲ್ಲಿ ತೀವ್ರ ಗೊಂದಲದ ವಾತಾವರಣ ಉಂಟಾಯಿತು. ಯಾರೂ ಕೈ ಎತ್ತದ ಹಿನ್ನೆಲೆ, ಅವಿಶ್ವಾಸ ವಿಫಲ ಎಂದು ಸಭೆಯನ್ನು ಮುಕ್ತಾಯಗೊಳಿಸಲಾಯಿತು. ಬಳಿಕ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗಿ ನಗರಸಭೆ ಅಧ್ಯಕ್ಷರ ಕೊಠಡಿ ಬಳಿ ಧರಣಿ ನಡೆಸಿದರು.
ಸಭೆಯಲ್ಲಿ ಚಿಕ್ಕಮಗಳೂರು ಶಾಸಕರೂ ಸೇರಿದಂತೆ ಒಟ್ಟು 34 ಮಂದಿ ಹಾಜರಿದ್ದರು. ಅವಿಶ್ವಾಸ ನಿರ್ಣಯ ಅಂಗೀಕಾರಗೊಳ್ಳಲು ಮೂರನೇ ಎರಡರಷ್ಟು ಸದಸ್ಯ ಬಲದ ಅವಶ್ಯಕತೆ ಇತ್ತು. ಆದರೆ ಸಂಖ್ಯಾಬಲ ಕೂಡಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ.
ಪಕ್ಷದ ಆಂತರಿಕ ಒಪ್ಪಂದದಂತೆ ಮೊದಲ ಅವಧಿಗೆ ವರಸಿದ್ಧಿ ವೇಣುಗೋಪಾಲ್ ನಗರಸಭೆ ಅಧ್ಯಕ್ಷರಾಗಿದ್ದರು. ಮೊದಲ ಅವಧಿ ಬಳಿಕ ಅವರು ರಾಜೀನಾಮೆ ನೀಡಬೇಕಿತ್ತು. ಆದರೆ, ರಾಜೀನಾಮೆ ನೀಡದೇ ಸತಾಯಿಸುತ್ತಿದ್ದರು. ಈ ಸಂಬಂಧ ಆಕ್ರೋಶಗೊಂಡ ಬಿಜೆಪಿ ಸದಸ್ಯರು, ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಂಡರು. ಇದಕ್ಕೂ ಮೊದಲು ನಗರಸಭೆ ಹಾಲಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿತ್ತು.
ಕ್ಷೇತ್ರದ ಸಂಸದರೂ ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದರೂ ಈ ಸಭೆಗೆ ಬಂದಿರಲಿಲ್ಲ. ಶಾಸಕ ಎಚ್ ಡಿ ತಮ್ಮಯ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದ ಎಸ್ಡಿಪಿಐ ಸದಸ್ಯೆ ಕೂಡ ಸಭೆಗೆ ಹಾಜರಾಗಿರಲಿಲ್ಲ.
ಇದನ್ನೂ ಓದಿ : ಚಿಕ್ಕಮಗಳೂರು ನಗರಸಭೆ ಅಧ್ಯಕ್ಷನ ವಿರುದ್ಧ ನಾಳೆ ಅವಿಶ್ವಾಸ ಮಂಡನೆ, ಪೊಲೀಸ್ ಇಲಾಖೆಯಿಂದ ಬಿಗಿಭದ್ರತೆ