ಚಿಕ್ಕಮಗಳೂರು: ಇತ್ತ ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಆರ್ಭಟಕ್ಕೆ ಜನರ ಬದುಕು ನೀರುಪಾಲಾಗಿದ್ದರೆ, ಅತ್ತ ಜಿಲ್ಲೆಯ ಬಯಲುಸೀಮೆ ಭಾಗದಲ್ಲಿ ಸರಿಯಾಗಿ ಮಳೆಯಾಗದೇ ರೈತರು ಬೆಳೆದ ಬೆಳೆಗಳು ಒಣಗಿ ಹೋಗಿದ್ದವು. ಇದೀಗ ಗಿರಿ-ಶಿಖರಗಳಲ್ಲಿ ಹಾಗೂ ಬೆಟ್ಟ-ಗುಡ್ಡಗಳಲ್ಲಿ ಮಳೆಯಾಗಿರುವ ಕಾರಣ ಅಯ್ಯನ ಕೆರೆ ತುಂಬಿದ್ದು, ಆ ಕೆರೆಯ ನೀರು ಕಡೂರು ತಾಲೂಕಿನಲ್ಲಿ ಹರಿಯುವ ವೇದಾವತಿಗೆ ಸೇರಿ ನದಿಯಲ್ಲಿ ನೀರು ಹರಿಯಲು ಪ್ರಾರಂಭಿಸಿದೆ.
ಕಡೂರು ತಾಲೂಕಿನಲ್ಲಿರುವ ವೇದಾವತಿ ನದಿಯಲ್ಲಿ ಕಳೆದ ಎಂಟು ವರ್ಷದಿಂದ ನೀರು ಹರಿದಿರಲಿಲ್ಲ. ಆದರೆ ಈಗ ನದಿ ತುಂಬಿ ಉಕ್ಕಿ ಹರಿಯುತ್ತಿದೆ. ಬಹಳ ವರ್ಷಗಳ ನಂತರ ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ಸ್ಥಳೀಯರಲ್ಲಿ ಸಂತೋಷ ಮನೆ ಮಾಡಿದೆ.