ಚಿಕ್ಕಮಗಳೂರು : ಯುವತಿಯೋರ್ವಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ನರಳಿ ಪ್ರಾಣಬಿಟ್ಟ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಕನಸು ಕಟ್ಟಿಕೊಂಡಿದ್ದ ಬಿಕಾಂ ವಿದ್ಯಾರ್ಥಿನಿಯ ಜೀವನ ಮಣ್ಣುಪಾಲಾಗಿದೆ.
ನಗರದ ಗೌರಿ ಕಾಲುವೆಯ ನಿವಾಸಿ ವಿಶೇಷಚೇತನ ನಫೀಯಾ (20) ಸಾವನ್ನಪ್ಪಿದ್ದು, ಕೊನೆಯ ಕ್ಷಣದಲ್ಲಿ ಕುಟುಂಬದ ಸದಸ್ಯರಿಗೂ ಆಕೆಯ ಮುಖ ನೋಡದ ಹಾಗೆ ಜಿಲ್ಲಾಡಳಿತ ಮಾಡಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಮೊದಲ ವರ್ಷದ ಬಿಕಾಂ ವ್ಯಾಸಾಂಗ ಮಾಡುತ್ತಿದ್ದ ನಫೀಯಾಗೆ ಜುಲೈ 24ರಂದು ಆರೋಗ್ಯ ಸಮಸ್ಯೆ ಕಾಣಿಸಿತ್ತು. ಸತತ 3 ಗಂಟೆಗಳ ಕಾಲ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಅಲೆದರೂ ಕೊರೊನಾ ರಿಪೋರ್ಟ್ ಇಲ್ಲದ ಕಾರಣ ಖಾಸಗಿ ಆಸ್ಪತ್ರೆಗಳು ದಾಖಲಿಸಿಕೊಳ್ಳಲು ನಕಾರ ಮಾಡಿವೆ. ಕಾರಣ, ಆ ದಿನವೇ ಚಿಕಿತ್ಸೆ ಫಲಕಾರಿಯಾಗದೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.
ಆದರೆ, ಆಸ್ಪತ್ರೆ ಸಿಬ್ಬಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾಳೆ ಎಂದು ಪೋಷಕರಿಗೆ ತಿಳಿಸಿ ಮುಖವನ್ನೂ ತೋರಿಸದೆ ಅಂತ್ಯ ಸಂಸ್ಕಾರ ಮಾಡಿದ್ದರು. ಕೊನೆ ಕ್ಷಣ ಮಗಳ ಮುಖವನ್ನು ನೋಡದ ಆಕೆಯ ತಾಯಿ ಹಾಗೂ ಕುಟುಂಬದ ಸದಸ್ಯರು ಕಣ್ಣೀರಿಟ್ಟಿದ್ದರು.
ಅಲ್ಲದೆ ಕೊರೊನಾ ಸೋಂಕು ತಗುಲಿದೆ ಎಂದು ಆಕೆಯ ಮನೆಯ ರಸ್ತೆಯನ್ನು ಅಧಿಕಾರಿಗಳು ಸೀಲ್‌ಡೌನ್ ಕೂಡ ಮಾಡಿದ್ದರು. ಆದರೆ, ಮೃತ ಯುವತಿಗೆ ಕೊರೊನಾ ಸೋಂಕು ತಗುಲಿರಲಿಲ್ಲ. ಈಗ ಮೃತ ಯುವತಿಯ ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದಿದೆ. ನಿನ್ನೆ ವರದಿಯನ್ನು ಜಿಲ್ಲಾಡಳಿತ ಅವರ ಕುಟುಂಬಕ್ಕೆ ನೀಡಿದೆ.
ಎಚ್ಚರಿಕೆ ವಹಿಸಿ ಜನರ ಜೀವ ರಕ್ಷಣೆ ಮಾಡಬೇಕಾದ ಜಿಲ್ಲಾಡಳಿತ ತನ್ನ ಬೇಜವಾಬ್ದಾರಿ ತನದಿಂದ ಯುವತಿ ಜೀವನ ನಾಶ ಮಾಡಿದೆ. ಅಲ್ಲದೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಬೇಕಿದ್ದ ಆಸ್ಪತ್ರೆಗಳು ವಿದ್ಯಾರ್ಥಿನಿಯ ಜೀವದ ಜೊತೆ ಚೆಲ್ಲಾಟ ಆಡಿದ್ದು ಮಾತ್ರ ನಿಜ.