ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ಇಂದು ಕೇವಲ ನೈಸರ್ಗಿಕ ತಾಣವಾಗಷ್ಟೇ ಉಳಿದಿಲ್ಲ. ದಿನದಿಂದ ದಿನಕ್ಕೆ ಕೊಲೆಗಡುಕರಿಗೆ ಕೊಲೆ ಮಾಡಿ ಶವ ಬಿಸಾಡಿ ಬಚಾವಾಗುವ ನೆಚ್ಚಿನ ತಾಣವಾಗ್ತಿದೆಯಾ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ. ಚಾರ್ಮಾಡಿ ಘಾಟ್ ಅಂದರೆ ತಣ್ಣನೆಯ ಗಾಳಿ, ಮುಗಿಲೆತ್ತರದ ಬೆಟ್ಟ-ಗುಡ್ಡಗಳು, ಹಾವು-ಬಳುಕಿನ ಮೈಕಟ್ಟು ರಸ್ತೆ, ಹಸಿರು ಸೀರೆಯುಟ್ಟು ಮುಡಿಯಲ್ಲಿ ಮಲ್ಲಿಗೆ ಹೂವಿನ ರಾಶಿಯಂತೆ ಮುತ್ತಿಕ್ಕುವ ಮಂಜು ಎಷ್ಟು ಹೇಳಿದರೂ ಸಾಲದು, ಇಲ್ಲಿನ ಸೌಂದರ್ಯ ಹಾಗೆಯೇ ಬಿಡಿ.
ಕೊಲೆಗಡುಕರ ದುಷ್ಕೃತ್ಯಕ್ಕೆ ಸುರಕ್ಷಿ ತಾಣ?: ಆದರೆ ಖಾಕಿ ತೊಟ್ಟ ಪೊಲೀಸರಿಗೆ ಮಾತ್ರ ಚಾರ್ಮಾಡಿಯ ಸೊಬಗಿನ ಮಧ್ಯೆ ಕೊಲೆ ಪ್ರಕರಣಗಳು ಸವಲಾಗಿ ಪರಿಣಮಿಸಿವೆ. ಇದಕ್ಕೆ ಕಾರಣ ಧುಮ್ಮಿಕ್ಕುವ ಜಲಪಾತಗಳ ಜೊತೆ ಅನಾಥ ಶವಗಳು ಆಗಾಗ ಚಾರ್ಮಾಡಿಯಲ್ಲಿ ಕಂಡುಬರುತ್ತಿವೆ. ಕರ್ನಾಟಕ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳ ಕಳ್ಳ-ಕಾಕರಿಗೆ ಈ ಜಾಗವೇ ಅಡ್ಡಾ ಆಗಿದೆ ಎಂಬ ಮಾತುಗಳು ಸ್ಥಳೀಯರಿಂದ ಕೇಳಿಬರುತ್ತಿವೆ.
ಇದನ್ನೂ ಓದಿ: ಪ್ರಕರಣ ಬೆಳಕಿಗೆ ಬಂದ 9 ತಿಂಗಳ ಬಳಿಕ ಚಾರ್ಮಾಡಿ ಘಾಟ್‌ನಲ್ಲಿ ಪೊಲೀಸರಿಂದ ಶವ ಹುಡುಕಾಟ
ಮುಗಿಲೆತ್ತರದ ಬೆಟ್ಟ-ಗುಡ್ಡಗಳ ಮಧ್ಯೆ ಸಾವಿರಾರು ಅಡಿಯ ಕಂದಕವಿರೋದನ್ನು ನೋಡಿ ಕೊಲೆಗಡುಕರಿಗೆ ತಮ್ಮ ಕೃತ್ಯಗಳನ್ನು ಈ ಸ್ಥಳದಲ್ಲಿ ನಡೆಸುತ್ತಿದ್ದಾರೆ. ಚೆಕ್ಪೋಸ್ಟ್ನಲ್ಲಿ ಪೊಲೀಸರು ವಾಹನಗಳನ್ನು ಚೆಕ್ ಮಾಡದಿರುವುದು ಅವರಿಗೆ ಮತ್ತೊಂದು ಪ್ಲಸ್ ಪಾಯಿಂಟ್ ಅಂತಾನೇ ಹೇಳ್ಬೋದು. ಕಳೆದ ನಾಲ್ಕೈದು ವರ್ಷದಲ್ಲಿ 25ಕ್ಕೂ ಹೆಚ್ಚು ಶವಗಳು ಇಲ್ಲಿ ಪತ್ತೆಯಾಗಿವೆ. ಅವುಗಳು ಕೊಳೆತು ವಾಸನೆ ಬಂದ ಮೇಲಷ್ಟೇ ಗೊತ್ತಾಗೋದು. ಆದರೆ ಕೆಲವೊಂದು ಹೆಣಗಳು ಕೊಳೆತ ಮೇಲೂ ಗೊತ್ತಾಗಿಲ್ಲ. ಆ ಮಟ್ಟಿಗಿನ ಪ್ರಪಾತ ಇಲ್ಲಿಯದ್ದು. ಸಾವಿರಾರು ಅಡಿ ಕಂದಕಕ್ಕಿಳಿದು ಮೃತದೇಹ ಎತ್ತುವಷ್ಟರಲ್ಲಿ ಪೊಲೀಸರಿಗೆ ತಮ್ಮ ವೃತ್ತಿಯೇ ಸವಾಲಿನದ್ದಾಗಿದೆ. ಹೀಗಾಗಿಯೇ ಸ್ಥಳೀಯರು ಚಾರ್ಮಾಡಿ ಮಧ್ಯದಲ್ಲೇ ಸ್ಟೇಷನ್ ನಿರ್ಮಿಸಿ ಪ್ರತಿಯೊಂದು ಗಾಡಿಯನ್ನು ಸಮಗ್ರವಾಗಿ ಚೆಕ್ ಮಾಡಿಯೇ ಕಳುಹಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ಶವ ಹುಡುಕಿ ಬಂದ ಪೊಲೀಸರು ಬರಿಗೈಲಿ ವಾಪಸ್: ಕೊಲೆಗಡುಕರು ಶವ ಹೊತ್ತುಕೊಂಡು ಬಂದು ಸೌಂದರ್ಯದ ಮಡಿಲಲ್ಲಿ ಹಾಕಿ ಹೋಗುತ್ತಾರೆ. ಬಹುಶಃ ಒಂದು ವಾರ ಅಥವಾ ಹದಿನೈದು ದಿನ ಆ ಶವಕ್ಕಾಗಿ ಹುಡುಕಾಡಿದರೇ ಪೊಲೀಸರಿಗೆ ಸಿಗಬಹುದೇನೋ. ಆದರೆ ತಿಂಗಳುಗಳು ಬಿಟ್ಟು ಬಂದರೇ ಬರಿ ಕೈಯಲ್ಲೇ ವಾಪಸ್ ಹೋಗಬೇಕು. ಅದಕ್ಕೆ ಉದಾಹರಣೆ ಎಂಬಂತೆ, 9 ತಿಂಗಳ ಹಿಂದಿನ ಶವ ಹುಡುಕಿಕೊಂಡು ಬಂದ ಬೆಂಗಳೂರು ಪೊಲೀಸರು ಮೂರು ದಿನ ಹುಡುಕಿ ಸಿಗಲಿಲ್ಲ ಅಂತ ಖಾಲಿ ಕೈಯಲ್ಲೇ ವಾಪಸ್ ಹೋಗಿದ್ದರು.
ಹೀಗಾಗಿ ಸ್ಥಳೀಯರು ಕೂಡ ಬೆಳ್ತಂಗಡಿಯ ಚಾರ್ಮಾಡಿ ಗ್ರಾಮ ಹಾಗೂ ಮೂಡಿಗೆರೆಯ ಕೊಟ್ಟಿಗೆಹಾರ ಬಳಿ ಚೆಕ್‍ಪೋಸ್ಟ್ ಬಂದೋಬಸ್ತ್ ಮಾಡಬೇಕು. ಪ್ರತಿಯೊಂದು ಗಾಡಿಯನ್ನೂ ತಪಾಸಣೆ ಮಾಡಿಯೇ ಬಿಡಬೇಕು. ರಾತ್ರಿ ವೇಳೆಯೂ ಚಾರ್ಮಾಡಿಯಲ್ಲಿ ಗಸ್ತು ತಿರುಗಬೇಕು. ಆಗ ಮಾತ್ರ ಇಂತಹ ಕೊಲೆ ಪ್ರಕರಣಗಳು ಕಂಟ್ರೋಲ್‍ಗೆ ಬರಲು ಸಾಧ್ಯ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನ ಹತ್ಯೆ; ಚಾರ್ಮಾಡಿ ಘಾಟ್‌ನಲ್ಲಿ ಶವ ಎಸೆದ ಆರೋಪಿಗಳು ಸೆರೆ