ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಅದ್ಧೂರಿಯಾಗಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯನ್ನು ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಮಾಡಲಾಯಿತು. ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರು ಧ್ವಜಾರೋಹಣ ನೆರವೇರಿಸಿದರು. ಶಾಸಕ ಸಿ.ಟಿ. ರವಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿದ್ದರು.
ಜಿಲ್ಲಾ ಉಸ್ತುವಾರಿ ಮಂತ್ರಿಗಳ ಅನುಪಸ್ಥಿತಿಯ ಕಾರಣ ಜಿಲ್ಲಾಧಿಕಾರಿ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್, ಹೋಂ ಗಾರ್ಡ್, ವಿದ್ಯಾರ್ಥಿಗಳಿಂದ ಅಕರ್ಷಕ ಪಥಸಂಚಲನ ನಡೆಯಿತು.
ಇದೇ ವೇಳೆ ಮಾತನಾಡಿದ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಈ ದೇಶಕ್ಕೆ ಒಬ್ಬರಿಂದಲೇ ಸ್ವಾತಂತ್ರ್ಯ ಬಂತು ಅಂದರೆ ಅದು ಮೂರ್ಖುತನ ಆಗುತ್ತೆ. ಸ್ವಾತಂತ್ರ್ಯ ಅಹಿಂಸೆಯಿಂದ ಬಂತು ಎಂಬ ಅರ್ಧ ಸತ್ಯದ ಗಿಳಿ ಪಾಠವನ್ನು ಕೇಳಿಕೊಂಡು ಬಂದಿದ್ದೇವೆ. ಮೊಸರಲ್ಲಿ ಕಲ್ಲು ಹುಡುಕುವವರಿಗೆ ಎಲ್ಲವೂ ತಪ್ಪಾಗಿ ಕಾಣುತ್ತೆ. ಬ್ರಿಟಿಷರ ಎದೆ ನಡುಗಿದ್ದು ಅಹಿಂಸಾ ಹೋರಾಟಕ್ಕಲ್ಲ, ಕ್ರಾಂತಿಕಾರಿಗಳ ಹೋರಾಟಕ್ಕೆ ಎಂದರು.
ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದು ಬೋಸ್ ಅವರ ಅಜಾದ್ ಹಿಂದ್ ಪೌಜ್ ಸೇನೆ. ಅಹಿಂಸಾ ಹೋರಾಟ ದೊಡ್ಡ ಪ್ರಮಾಣದ ಪಾತ್ರ ವಹಿಸಿದೆ. ಅದರಿಂದಲೇ ಸ್ವಾತಂತ್ರ್ಯ ಬಂತು ಅಂದರೆ ಕ್ರಾಂತಿಕಾರಿಗಳ ಬಲಿದಾನಕ್ಕೆ ನಾವು ಕೊಡುವ ಬೆಲೆ ಏನು? ಎಷ್ಟೋ ಜನ ಮುಂದೆ ನಿಂತು ಹೋರಾಡಿದ್ದಾರೆ. ಲಕ್ಷಾಂತರ ಜನ ತೆರೆಮರೆಯಲ್ಲಿ ಬಲಿಯಾಗಿದ್ದಾರೆ. ತಾವು ಹಾಕಿರೋ ಹಳದಿ ಕನ್ನಡಕ ತೆಗೆದರೆ ಇತಿಹಾಸದ ಆಳದ ಅರಿವಾಗುತ್ತೆ ಎಂದು ಸಿ.ಟಿ. ರವಿ ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ ಮುಖಂಡರು ಚುನಾವಣೆ ಮೊದಲು ಸಿಎಂ ಅಭ್ಯರ್ಥಿ ಘೋಷಿಸಲಿ.. ಉಮೇಶ್ ಕತ್ತಿ