ಚಿಕ್ಕಮಗಳೂರು : ನ್ಯಾಯಾಲಯದ ಬಗ್ಗೆ ಅಗೌರದ ಮಾತನಾಡಿಲ್ಲ, ನ್ಯಾಯಾಲಯದ ಬಗ್ಗೆ ಗೌರವ ಇದೆ. ಇರುತ್ತೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ.
ನ್ಯಾಯಾಧೀಶರು ಸರ್ವಜ್ಞರಲ್ಲ ಎಂದು ಹೇಳಿದ್ದೇನೆ. ಅವರು ಕೂಡಾ ತಾಂತ್ರಿಕ ಸಮಿತಿಯ ವರದಿ ಆಧರಿಸಿ ನಿರ್ದೇಶನ ಕೊಡ್ತಾರೆ. ಸುಪ್ರೀಂಕೋರ್ಟ್ ಹೇಳಿಯೇ ಟೆಕ್ನಿಕಲ್ ಕಮಿಟಿ ನೇಮಿಸಿದೆ ಎಂದಿದ್ದೇನೆ. ನನ್ನ ಹೇಳಿಕೆಯಲ್ಲಿ ಅಗೌರವ, ಅಪನಂಬಿಕೆಯ ಹುಟ್ಟಿಸುವ ಹೇಳಿಕೆ ಏನಿದೆ. ಸರ್ವಜ್ಞ ಅಲ್ಲದ ಅಪನಂಬಿಕೆಯ ಪದವೇ, ನಿಂದನೆಯೇ, ಟೀಕೆಯೇ ಏನೂ ಅಲ್ಲ ಎಂದಿದ್ದಾರೆ.
ಜಗದ 780 ಕೋಟಿ ಜನರಲ್ಲಿ ಎಲ್ಲಾ ತಿಳಿದ ಸರ್ವಜ್ಞರಿಲ್ಲ. ಹೆಚ್ಚು ತಿಳಿದವರಿರಬಹುದು, ನನ್ನಂಥ ಅಲ್ಪ ತಿಳಿದವರಿರಬಹುದು, ಸರ್ವಜ್ಞರಿಲ್ಲ. ಪ್ರಧಾನಿಯನ್ನ ನರಹಂತಕ ಎಂದರೂ ಅದು ಅಸಂವಿಧಾನಿಕ ಪದ. ಅಧಿಕೃತ ಪಕ್ಷಗಳ ಸಮಾಜಿಕ ಜಾಲತಾಣದಲ್ಲಿ ಯಮನ ರೂಪದಲ್ಲಿ ತೋರಿಸಿದ್ದರು. ನನ್ನ ಒಂದೊಂದು ಶಬ್ಧಕ್ಕೂ ನಾನು ಕಮಿಟಿಡ್ ಇದ್ದೇನೆ, ಯಾರೂ ತಪ್ಪು ಗ್ರಹಿಸಬಾರದು ಎಂದು ಹೇಳಿದರು.