ಚಿಕ್ಕಮಗಳೂರು : ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಮಿಶ್ರ ಫಲಿತಾಂಶ ಸಿಕ್ಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಾನಗಲ್ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸೋತಿದ್ದಕ್ಕೆ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಲ್ಲ. ಬದಲಾಗಿ ಜನರ ತೀರ್ಪನ್ನು ಸ್ವಾಗತಿಸುತ್ತೇನೆ ಎಂದರು.
ಬಿಜೆಪಿ ಎರಡೂ ಕಡೆ ಗೆದ್ದಿದ್ದರೆ ವಿಪಕ್ಷಗಳು ಮತಯಂತ್ರಗಳನ್ನು(ಇವಿಎಂ) ದೂರುತ್ತಿದ್ದರು. ನಾವು ಗೆದ್ದ ಇಬ್ಬರನ್ನೂ ಅಭಿನಂದಿಸುತ್ತೇವೆ. ಉಪಚುನಾವಣೆಯ ಮಿಶ್ರ ಫಲಿತಾಂಶ ಮುಖ್ಯಮಂತ್ರಿ ಹಾಗೂ ಆಡಳಿತ ಪಕ್ಷದ ವಿರುದ್ಧದ ಜನಾದೇಶ ಅಲ್ಲ ಎಂದರು.
ಕಾಂಗ್ರೆಸ್ನ ಶ್ರೀನಿವಾಸ್ ಮಾನೆ ಈ ಹಿಂದಿನ ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕ ಹೊಂದಿದ್ದರು. ನಮ್ಮಲ್ಲಿ ನಾಮಪತ್ರದ ಹಿಂದಿನ ದಿನದವರೆಗೂ ಅಭ್ಯರ್ಥಿ ಅಂತಿಮವಾಗದಿರೋದು ಗೆಲುವಿನ ಮೇಲೆ ಪರಿಣಾಮ ಬೀರಿದೆ ಎಂದು ಸಿ.ಟಿ. ರವಿ ಹೇಳಿದರು.