ಚಿಕ್ಕಮಗಳೂರು: ಮನುಷ್ಯರಿಗಿಂತ ಪ್ರಾಣಿ-ಪಕ್ಷಿಗಳೇ ಎಷ್ಟೋ ವಾಸಿ ಎಂದು ಅನೇಕ ಬಾರಿ ಅನ್ನಿಸುವುದುಂಟು. ಮಾನುಷ್ಯನಿಗೆ ಕುಟುಂಬ ಇದ್ದರೂ ಅರೆ ಕ್ಷಣವಾದರೂ ಆತ ಸ್ವಾರ್ಥಕ್ಕಾಗಿ ಯೋಚನೆ ಮಾಡಿ ತಮ್ಮವರನ್ನೂ ದೂರ ತಳ್ಳುತ್ತಾನೆ. ಪಕ್ಷಿಗಳಿಗೂ ಕುಟುಂಬವಿದೆ. ಅವುಗಳೂ ತಮ್ಮ ಮಕ್ಕಳಿಗಾಗಿ ಪ್ರತಿನಿತ್ಯ ಹೋರಾಟ ಮಾಡುತ್ತವೆ. ಪಕ್ಷಿಗಳ ಕುಟುಂಬ ಹೇಗಿರುತ್ತೆ? ವಿಶೇಷ ವರದಿ ಇಲ್ಲಿದೆ
ಪುಟ್ಟ ಗೂಡಿನಲ್ಲಿ ಮಲಗಿರುವ ಪುಟಾಣಿ ಮರಿಗಳು.. ಈ ಮರಿಗಳು ಹೊರ ಪ್ರಪಂಚಕ್ಕೆ ಕಾಲಿಟ್ಟು ಕೇವಲ ನಾಲ್ಕು ದಿನಗಳು ಮಾತ್ರ ಕಳೆದಿವೆ. ಇವು ಬುಲ್ ಬುಲ್ ಜಾತಿಗೆ ಸೇರಿದ ಪಕ್ಷಿಗಳು. ನಗರದ ಹೊರವಲಯದ ಪುಟ್ಟಸ್ವಾಮಿ ಎಂಬವರ ಮನೆ ಆವರಣದಲ್ಲಿರುವ ದಾಸವಾಳ ಗಿಡದಲ್ಲಿ ಪುಟ್ಟ ಗೂಡು ಕಟ್ಟಿಕೊಂಡು ವಾಸ ಮಾಡುತ್ತಿವೆ. ಸಾಮಾನ್ಯವಾಗಿ ಪಕ್ಷಿಗಳು ಮನುಷ್ಯರ ಕೈಗೆ ಸಿಗುವ ಹಾಗೆ ಗೂಡು ಕಟ್ಟೋದಿಲ್ಲ. ಆದರೆ, ಈ ಬುಲ್ ಬುಲ್ ಹಕ್ಕಿ ಎಲ್ಲರ ಕಣ್ಣಿಗೆ ಕಣೋ ಹಾಗೆ ಗೂಡು ಕಟ್ಟಿ ಸುಂದರ ಬದುಕು ಸಾಗಿಸುತ್ತಿದೆ.
ಈ ಗೂಡಿನಲ್ಲಿ ಪ್ರತಿನಿತ್ಯ ನಾಲ್ಕು ಹಕ್ಕಿಗಳು ವಾಸ ಮಾಡುತ್ತಿದ್ದು, ಇಬ್ಬರು ಮಕ್ಕಳು, ತಂದೆ ತಾಯಿ ಜೊತೆಗಿನ ಮಧುರ ಸಂಬಂಧ ಇಲ್ಲಿದೆ. ತಂದೆ ಆಹಾರ ತರಲು ಹೋದಾಗ ತಾಯಿ ಮಕ್ಕಳನ್ನು ಕಾಯುತ್ತಾಳೆ. ತಾಯಿ ಹೋದಾಗ ತಂದೆ ಇವರ ಕಾವಲುಗಾರನಾಗುತ್ತಾನೆ. ಇವರ ಬದುಕು ನೋಡುವುದೇ ಒಂದು ಸುಂದರ ದೃಶ್ಯಕಾವ್ಯ.
ಈ ಬುಲ್‌ಬುಲ್ ಹಕ್ಕಿ ದಾಸವಾಳ ಗಿಡದಲ್ಲಿ ಗೂಡು ಕಟ್ಟಿರಿವುದು ಮನೆಯ ಮಾಲೀಕರಿಗೆ ಗೊತ್ತಿದೆ. ಆದರೆ ಯಾವುದೇ ತೊಂದರೆ ಮಾಡುವುದಕ್ಕೆ ಹೋಗಿಲ್ಲ. ಒಂದು ನೀರಿನ ಚಿಪ್ಪು ಇಟ್ಟು ಪ್ರತಿನಿತ್ಯ ಪಕ್ಷಿಗಳಿಗೆ ನೀರುಣಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮನೆಯ ಮಾಲೀಕರು ಒಂದು ಘಟನೆಯನ್ನು ಸಹ ಮೆಲುಕು ಹಾಕಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಈ ಪಕ್ಷಿಗಳು ನಲುಗಿ ಹೋಗಿದ್ದವು. ಮನೆಯವರು ಏನಾದ್ರೂ ಸಹಾಯ ಮಾಡೋಣ ಎಂದು ಗೂಡಿನ ಬಳಿ ಹೋಗಿ ಹಾಗೆ ವಾಪಸ್ ಬಂದಿದ್ದಾರೆ. ಯಾಕೆಂದರೆ ಮರಿಗಳನ್ನು ಮುಟ್ಟಿದರೆ ತಂದೆ ತಾಯಿ ಪಕ್ಷಿಗಳು ಹತ್ತಿರ ಬರೋದಿಲ್ಲ ಎಂಬ ಆತಂಕ. ನಂತರ ಇವರು ವಾಪಸ್ ಬರುತಿದ್ದಂತೆ ತಾಯಿ ಪಕ್ಷಿ ಬಂದು ಗೂಡಿನಲ್ಲಿ ಕುಳಿತು ಒಂದು ಹನಿ ನೀರು ಮರಿಗಳ ಮೇಲೆ ಬೀಳದಂತೆ ಎರಡು ರೆಕ್ಕೆಗಳನ್ನು ತೆರೆದು ಕೊಡೆಯ ಆಕಾರ ಮಾಡಿ ಮರಿಗಳ ರಕ್ಷಣೆ ಮಾಡಿದೆ. ಈ ದೃಶ್ಯ ನೋಡಿ ಮನೆಯ ಮಾಲೀಕರು ಮೌನಕ್ಕೆ ಶರಣಾಗಿದ್ದಾರೆ.
ಈ ಪಕ್ಷಿ ಯಾರನ್ನೂ ಗೂಡಿನ ಹತ್ತಿರ ಸುಳಿಯೋದಕ್ಕೆ ಬಿಡುತ್ತಿಲ್ಲ. ಯಾರಾದರೂ ಗೂಡಿನ ಬಳಿ ಹೋದರೆ ಅವರನ್ನು ಕುಕ್ಕುವುದು ಅಥವಾ ಜೋರಾಗಿ ಶಬ್ದ ಮಾಡಿ ಹೆದರಿಸುತ್ತಿದೆ. ಅದಕ್ಕೂ ಮೀರಿ ಯಾರಾದರೂ ಗೂಡಿನ ಬಳಿ ಹೋದರೆ ತಾಯಿ ಪಕ್ಷಿ ನೆಲಕ್ಕೆ ಬಿದ್ದು ವಿಚಿತ್ರ ರೋಧನೆ ಹಾಗೂ ನೋವನ್ನು ಅನುಭವಿಸುತ್ತದೆ. ಈ ಪಕ್ಷಿಯನ್ನು ನೋಡಿಯಾದರೂ ಬದುಕು, ಕುಟುಂಬ ಸಂಬಂಧ ಹಾಗೂ ಪ್ರೀತಿಯನ್ನು ಮನುಷ್ಯರು ಕಲಿಯಬೇಕಿದೆ.