ಚಿಕ್ಕಮಗಳೂರು: ಒಂದು ಕರುವಿಗೆ ಜನ್ಮ ನೀಡಿದ ಎಮ್ಮೆ 8 ದಿನಗಳ ತರುವಾಯ ಮತ್ತೊಂದು ಕರುವಿಗೆ ಜನ್ಮ ನೀಡಿರುವ ವಿಚಿತ್ರವೆನಿಸುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ವರದಿಯಾಗಿದೆ. ಎನ್.ಆರ್.ಪುರ ತಾಲೂಕಿನ ಶಂಕರಪುರ ಸಮೀಪದ ಮಡುಬ ರಸ್ತೆಯಲ್ಲಿ ಸಿಗುವ ಹಳಿಯೂರಿನ ಸುಧಾಕರ ಗೌಡ ಎಂಬವರ ಮನೆಯ ಎಮ್ಮೆ ವಾರದ ಹಿಂದೆ ಗಂಡು ಕರು ಹಾಕಿತ್ತು. ವಿಚಿತ್ರವೆಂದರೆ, ಮಂಗಳವಾರ ಬೆಳಿಗ್ಗೆ ಮತ್ತೊಂದು ಗಂಡು ಕರು ಹಾಕಿದೆ.
ಈ ಘಟನೆಗೆ ಅಚ್ಚರಿ ವ್ಯಕ್ತಪಡಿಸಿದ ಸುಧಾಕರ್, "ನಾನು ಹಲವು ವರ್ಷಗಳಿಂದ ಹಸು ಸಾಕುತ್ತಿದ್ದೇನೆ. ಸಾಮಾನ್ಯವಾಗಿ ಹಸು ಎರಡು ಕರು ಹಾಕುವುದಾದರೆ ಒಂದೇ ದಿನದಲ್ಲೇ ಹಾಕುತ್ತದೆ. ಆದರೆ ಈ ಎಮ್ಮೆ ಒಂದು ಕರು ಹಾಕಿ ಎಂಟು ದಿನಗಳ ನಂತರ ಮತ್ತೊಂದು ಕರು ಹಾಕಿರುವುದು ವಿಶೇಷ. ಎಮ್ಮೆಗೆ ಕೃತಕ ಗರ್ಭಧಾರಣೆ ಮಾಡಿಸಿಲ್ಲ. ಈ ಸಂಗತಿಯನ್ನು ಈಗಾಗಲೇ ಪಶು ಇಲಾಖೆಯ ಗಮನಕ್ಕೆ ತಂದಿದ್ದೇನೆ. ಅವರು ಬಂದು ನೋಡುವುದಾಗಿ ಹೇಳಿದ್ದಾರೆ" ಎಂದರು.
ತಾಲೂಕು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವಕುಮಾರ್ ಪ್ರತಿಕ್ರಿಯಿಸಿ, "ಇಂತಹ ಪ್ರಕರಣ ಜಿಲ್ಲೆಯಲ್ಲಿ ನಡೆದಿದ್ದು ಇದೇ ಮೊದಲು. ಸಾಮಾನ್ಯವಾಗಿ ಹಂದಿಗಳು ಒಂದು ಮರಿ ಹಾಕಿದ ನಂತರ ಒಂದು ವಾರ ಬಿಟ್ಟು ಮತ್ತೊಂದು ಮರಿ ಹಾಕುತ್ತವೆ. ಹಸು, ಎಮ್ಮೆಗಳು ಮಾತ್ರ ಒಂದೇ ದಿನ ಕರು ಹಾಕುತ್ತವೆ. ಇಂಥದ್ದು ಅಪರೂಪ. ಸ್ಥಳಕ್ಕೆ ಹೋಗಿ ಮಾಹಿತಿ ಪಡೆಯುತ್ತೇನೆ" ಎಂದು ತಿಳಿಸಿದರು.
ಇದನ್ನೂ ಓದಿ: ಪ್ರಕೃತಿ ವಿಸ್ಮಯ: ಅಲುಗಾಡಿದ 400 ವರ್ಷದ ಹುತ್ತ, ಮೂಕ ವಿಸ್ಮಿತರಾದ ಭಕ್ತರು