ಚಿಕ್ಕಮಗಳೂರು : ಅದು ಕುಗ್ರಾಮ. ಎತ್ತ ಕಣ್ಣು ಹಾಯಿಸಿದರೂ ದಟ್ಟ ಅರಣ್ಯವೇ ಕಾಣುತ್ತೆ. ಇದರ ನಡುವೆಯೇ ನೂರಾರು ವರ್ಷಗಳಿಂದ ಜನರ ಬದುಕು ಸಾಗುತ್ತಿದೆ. ಗ್ರಾಮದ ಮುಂದೆ ಹಳ್ಳವೊಂದು ಸದಾಕಾಲ ಹರಿಯುತ್ತೆ. ಅದನ್ನ ದಾಟಿದ್ರೆ ಮಾತ್ರ ಪಟ್ಟಣಕ್ಕೆ ಹೋಗೋಕೆ ಸಾಧ್ಯ. ಆದರೆ, ಮೂರು ವರ್ಷದ ಹಿಂದೆಯೇ ಕೊಚ್ಚಿ ಹೋಗಿದ್ದ ಸೇತುವೆಗೆ ಇನ್ನೂ ಮರು ಜೀವ ಬಂದಿಲ್ಲ. ಈಗ ಮಳೆಗಾಲ ಶುರುವಾಗ್ತಾ ಇದ್ದಂತೆ ಹಳ್ಳದ ನೀರು ಏರಿಕೆಯಾದ್ರೆ ತಿಂಗಳುಗಟ್ಟಲೇ ಜಲದಿಗ್ಬಂಧನದ ಭೀತಿ ಕಳಸ ತಾಲೂಕಿನ ಕಾರ್ಲೇ ಗ್ರಾಮಸ್ಥರಿಗೆ ಎದುರಾಗಿದೆ.
ಕಾರ್ಲೇ ಗ್ರಾಮ ಸುಮಾರು 30 ಮನೆಗಳಿಂದ ಕೂಡಿದೆ. ಇಲ್ಲಿನ ಜನ ಪಟ್ಟಣಕ್ಕೆ ಹೋಗಬೇಕಾದ್ರೆ ಹಳ್ಳ ದಾಟಲೇಬೇಕು. ಆದ್ರೆ, ಸೇತುವೆ ಸರಿ ಇಲ್ಲದ ಕಾರಣ ಮರದ ದಿಮ್ಮಿಯನ್ನು ಅವರು ಆಶ್ರಯಿಸಬೇಕಾದ ಸ್ಥಿತಿ ಬಂದಿದೆ. ಈ ಸಮಸ್ಯೆ ಶುರುವಾಗಿ ಮೂರು ವರ್ಷವೇ ಕಳೆದಿದೆಯಂತೆ. ಸದ್ಯಕ್ಕೆ ಬೇಸಿಗೆ ಇರುವುದರಿಂದ ಜನ ಹಳ್ಳ ದಾಟುತ್ತಿದ್ದಾರೆ. ವರುಣನ ಅಬ್ಬರಕ್ಕೆ ಇನ್ನೇನೂ ತಿಂಗಳು ಮಾತ್ರ ಬಾಕಿ ಇದೆ. ಇದು ಜನರ ಎದೆಯಲ್ಲಿ ನಡುಕ ಹುಟ್ಟಲು ಕಾರಣವಾಗಿದೆ.
ಕುದುರೆಮುಖ ಭಾಗದಲ್ಲಂತೂ ಮಳೆ ಅತಿ ಹೆಚ್ಚಾಗಿಯೇ ಆಗುತ್ತೆ. ಇರೋ ಹಳ್ಳಗಳು, ರಸ್ತೆಗಳು ಬಂದ್ ಆಗ್ತವೆ. ಅದರಂತೆ ಕಾರ್ಲೆ ಗ್ರಾಮದಲ್ಲಿ ಹರಿಯುವ ಹಳ್ಳವೂ ಅಪಾಯದ ಮಟ್ಟದಲ್ಲಿ ಹರಿಯುತ್ತೆ. ಮುಂದೆ ಬರುವ ಮಳೆಗಾಲದಲ್ಲಿ ಜಲದಿಗ್ಬಂಧನದ ಭೀತಿ ಇದೆ ಅಂತಾರೆ ಗ್ರಾಮಸ್ಥರು. ಇನ್ನು ಈ ಊರಿನ ಜನರು ಕಾಯಿಲೆಗೆ ಬಿದ್ರೆ ಸಂಪರ್ಕಿಸಲು ಅಸಾಧ್ಯವೇ ಸರಿ.
ಕಾರಣ ನೆಟ್‌ವರ್ಕ್ ಸಮಸ್ಯೆ. ಊರಿಗೆ ಯಾವ ವಾಹನವೂ ಬರೋದಿಲ್ಲ. ಬಾಡಿಗೆ ಕೇಳಿದ್ರೆ ಎಲ್ಲರಿಗೂ ಆಗೋ ರೀತಿಯಲ್ಲಿ ಕೇಳ್ತಾರಂತೆ. ಇದು ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿ ಎಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಓದಿ: ಬೆಂಗಳೂರು ಪೊಲೀಸರೊಂದಿಗೆ ಡಿಜಿ - ಐಜಿಪಿ ಪ್ರವೀಣ್ ಸೂದ್ ಸಭೆ.. ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ