ಚಿಕ್ಕಮಗಳೂರು: ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲಿನ ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ಇದರ ಸತ್ಯಾ ಸತ್ಯತೆಯನ್ನೂ ನೀನೇ ಪರಿಶೀಲನೆ ಮಾಡಿ, ತಪ್ಪಿತಸ್ಥರಿಗೆ ನ್ಯಾಯ-ನೀತಿ-ಧರ್ಮದ ಆಧಾರದಲ್ಲಿ ಶಿಕ್ಷೆ ಕೊಡು ಎಂದು ಸೃಷ್ಠಿಕರ್ತ ಓಂಕಾರೇಶ್ವರನಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ದೀಪಕ್ ದೊಡ್ಡಯ್ಯ ಬೇಡಿಕೊಂಡಿದ್ದಾರೆ.
ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಓಂಕಾರೇಶ್ವರ ದೇವಾಲಯದಲ್ಲಿ ಮೂಡಿಗೆರೆ ತಾಲೂಕಿನ ಹುಲ್ಲೇಮನೆ-ಕುಂದೂರು ಗ್ರಾಮದಲ್ಲಿ ನಡೆದ ಶಾಸಕ ಕುಮಾರಸ್ವಾಮಿ ಮೇಲಿನ ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಒಳ್ಳೆಯ ಸಂಸ್ಕೃತಿಯಿಂದ ಬಂದವನು. ನಾನು ಅಷ್ಟು ಕೀಳುಮಟ್ಟದ ರಾಜಕಾರಣವನ್ನು ಮಾಡುವ ಸಣ್ಣ ಮನಸ್ಸಿನ ವ್ಯಕ್ತಿಯಲ್ಲ ಎಂದು ದೇವಸ್ಥಾನದಲ್ಲಿ ಮೊರೆ ಹೋಗಿದ್ದಾರೆ.
ಮೂರು ದಿನಗಳ ಹಿಂದೆ ಮೂಡಿಗೆರೆ ತಾಲೂಕಿನ ಹುಲ್ಲೇಮನೆ-ಕುಂದೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಸಾವನ್ನಪ್ಪಿದ್ದರು. ಶಾಸಕ ಕುಮಾರಸ್ವಾಮಿ ಸ್ಥಳ ಪರಿಶೀಲನೆಗೆಂದು ಹೋದಾಗ ಕುಂದೂರು ಗ್ರಾಮದಲ್ಲಿ ಮಾತಿಗೆ-ಮಾತು ಬೆಳೆದು ಗಲಾಟೆಯಾಗಿತ್ತು. ಈ ವೇಳೆ ಸ್ಥಳೀಯರು ಶಾಸಕರ ಮೇಲೂ ಹಲ್ಲೆ ಮಾಡಿದ್ದರು. ಬಳಿಕ ಶಾಸಕ ಕುಮಾರಸ್ವಾಮಿ ನನ್ನ ಮೇಲಿನ ಹಲ್ಲೆಗೆ ದೀಪಕ್ ದೊಡ್ಡಯ್ಯನೇ ಕಾರಣ ಎಂದು ಆರೋಪಿಸಿದ್ದರು.
ದೇವರ ಮುಂದೆ ದೀಪಕ್ ದೊಡ್ಡಯ್ಯ ನಾನೇನು ಮಾಡಿಲ್ಲ ಎಂದು ಅಂಗಲಾಚುತ್ತಿದ್ದಾರೆ. ಅಲ್ಲಿ ಕುಮಾರಸ್ವಾಮಿ ಇದು ರಾಜಕೀಯ ದಾಳಿ ಅಂತಿದ್ದಾರೆ. ಹಾಗಾದರೆ, ದಾಳಿ ಮಾಡಿಸಿದ್ದರು ಯಾರು ಎಂಬ ಪ್ರಶ್ನೆ ಜೀವಂತವಾಗಿ ಉಳಿದಿದೆ.
ಇದನ್ನೂ ಓದಿ: ಕಾಡಾನೆ ದಾಳಿಗೆ ಮಹಿಳೆ ಬಲಿ.. ಸ್ಥಳಕ್ಕೆ ಹೋದ ಶಾಸಕನ ಮೇಲೆ ಹಲ್ಲೆ ಮಾಡಿ ಅಂಗಿ ಹರಿದ್ರಾ ಗ್ರಾಮಸ್ಥರು!?