ಚಿಕ್ಕಮಗಳೂರು : ಭಾರತದ ಪ್ರಧಾನಿ ಅವರು ಆಫ್ರಿಕಾ, ಆಸ್ಟ್ರೇಲಿಯಾ, ಅಮೆರಿಕ ಎಲ್ಲಿಗೆ ಹೋದರು ಮೋದಿ...ಮೋದಿ... ಅಂತಾರೆ. ಸಿದ್ದರಾಮಯ್ಯನವರ ಹೆಸರನ್ನ ಪಾಕಿಸ್ತಾನದಲ್ಲಿ ಯಾರಾದರೂ ಹೇಳಬಹುದು ಅಷ್ಟೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾವಿಯೊಳಗಿರೋ ಕಪ್ಪೆ ಬಾವಿಯನ್ನೇ ಪ್ರಪಂಚ ಎಂದು ಭಾವಿಸುತ್ತೆ, ಅವರು ಬಾವಿಯಲ್ಲಿರುವ ಕಪ್ಪೆ ಅಲ್ಲ. ಸಿದ್ದರಾಮಯ್ಯನವರೇ, ಇಂಗ್ಲೆಂಡಿನ ಅಧ್ಯಕ್ಷ ಬೋರಿಸ್ ಜಾನ್ಸನ್ ಅವರ ಮಾತನ್ನ ಕೇಳಿಸಿಕೊಳ್ಳಿ. ಒನ್ ಸನ್, ಒನ್ ಗ್ರೀಕ್, ಒನ್ ವರ್ಲ್ಡ್ ಓನ್ಲಿ ಒನ್ ನರೇಂದ್ರ ಮೋದಿ. ಇಸ್ರೇಲ್ ಅಧ್ಯಕ್ಷ ನಮ್ಮ ದೇಶದಲ್ಲಿ ನನಗಿಂತ ಪಾಪುಲರ್ ಯಾರಾದ್ರು ಇದ್ರೆ ಅದು ಮೋದಿ ಎಂದಿದ್ದಾರೆ.
ದೇಶದಲ್ಲಿ ಎಲ್ಲಿಯೇ ಹೋದ್ರು ಮೋದಿ...ಮೋದಿ...ಮೋದಿ... ಅಂತಾರೆ. ಕರ್ನಾಟಕದಿಂದ ಆಚೆ ಸಿದ್ದರಾಮಯ್ಯ ಹೆಸರೇಳುತ್ತಾರಾ. ರಾಹುಲ್ ಗಾಂಧಿ ಹೆಸರನ್ನೇ ಯಾರೂ ಹೇಳುವುದಿಲ್ಲ. ಯದ್ಭಾವಂ ತದ್ಭವತಿ ಎಂದು ಶ್ಲೋಕವಿದೆ. ನಾನಿದ್ದಂತೆ ಉಳಿದವರನ್ನ ಭಾವಿಸೋದು ಎಂದರ್ಥ. ಅವರು ಹಾಗೇ ಇದ್ದಾರೆ, ಅದಕ್ಕೆ ಎಲ್ಲರೂ ಹಾಗೇ ಕಾಣುತ್ತಾರೆ. ನರೇಂದ್ರ ಮೋದಿ ಓರ್ವ ಅಗ್ರಗಣ್ಯ ನಾಯಕ, ಇವರ ಸರ್ಟಿಫಿಕೇಟ್ ನಮಗೆ ಬೇಕಿಲ್ಲ ಎಂದು ಸಿದ್ದರಾಮಯ್ಯಗೆ ಸಿ ಟಿ ರವಿ ಟಾಂಗ್ ಕೊಟ್ಟರು.
ಜೆಡಿಎಸ್ ಬೆಂಬಲವಿಲ್ಲದಿದ್ದರೆ ಡಿಕೆಶಿ ಶಾಸಕನೂ ಆಗುತ್ತಿರಲಿಲ್ಲ :
ನಂತರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಗ್ಗೆ ಮಾತನಾಡಿದ ಅವರು, ಜೆಡಿಎಸ್ ಬೆಂಬಲ ಇಲ್ಲದಿದ್ರೆ ನೀವು ಶಾಸಕರಾಗಲು ತಿಣುಕಾಡಬೇಕಿತ್ತು. ಜೆಡಿಎಸ್ ಬೆಂಬಲ ಇಲ್ಲದಿದ್ರೆ ನಿಮ್ಮ ತಮ್ಮನನ್ನೂ ಸಂಸದರಾಗಿ ಗೆಲ್ಲಿಸಲು ಆಗುತ್ತಿರಲಿಲ್ಲ. ಬಿಜೆಪಿ ಅಲೆಯಲ್ಲಿ ಜೆಡಿಎಸ್ ಬೆಂಬಲ ಇದ್ದ ಕಾರಣಕ್ಕೆ ಸಂಸದರಾಗಿ ಆಯ್ಕೆಯಾದರು. ಕುಮಾರಸ್ವಾಮಿಯನ್ನ ಸಿಎಂ ಮಾಡಿ, ಇಳಿಸೋದಕ್ಕೆ ಅವರದ್ದೇ ಶಾಸಕರನ್ನ ಕಳಿಸಿದ್ದು ನಾವಾ. ಸಿಎಂ ಸ್ಥಾನದಲ್ಲಿ ಕೂರಿಸಿ, ಕಾಲೆಳೆದ ಎರಡೂ ಕೆಲಸ ಮಾಡಿದ್ದೂ ಅವರೇ. ಎಲ್ಲಿ ಜೆಡಿಎಸ್ ಸ್ಪರ್ಧೆ ಮಾಡಿಲ್ಲವೋ ಅಲ್ಲಿ ಬೆಂಬಲ ಕೊಡಿ ಎಂದು ಕೇಳಿದ್ದೇವೆ ಎಂದರು.
ಜೆಡಿಎಸ್ ಕೈನಲ್ಲಿ ಸ್ವಲ್ಪ ಮತಗಳಿವೆ, ಅವರು ಹಾಕುತ್ತೇವೆಂದು ಓಪನ್ ಆಗಿ ಹೇಳಿಲ್ಲ. ಮತದಾರರಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಅನ್ನೋದು ಗೊತ್ತು. ಕೈಗೆಟುಕದ ದ್ರಾಕ್ಷಿ ಹುಳಿ ಅನ್ನೋದು ಅವರಿಗೆ ಅನ್ವಯವಾಗುತ್ತೆ. ಒಪ್ಪಂದವೆಲ್ಲಾ ಕಾಂಗ್ರೆಸ್ಸಿಗೆ ಬಿಟ್ಟಿದ್ದು, ನಮ್ಮದು ಜನರೊಂದಿಗೆ ಸಂಬಂಧ ಎಂದು ಸಿ ಟಿ ರವಿ ಹೇಳಿದರು.