ಚಿಕ್ಕಮಗಳೂರು: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಘೋಷಣೆಯಾಗುವ ಮುನ್ನವೇ ಶೋಭಾ ಕರಂದ್ಲಾಜೆ ವಿರುದ್ಧ ಸ್ವಪಕ್ಷದ ಮುಖಂಡರಿಂದಲೇ ಮತ್ತೆ ಅಸಮಾಧಾನ ಹೊರ ಬಂದಿದೆ.
ತೆರೆಮರೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧೆಗೆ ಶಾಸಕ ಸಿ ಟಿ ರವಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅನ್ನೋ ಪ್ರಶ್ನೆ ಕೂಡ ಈಗ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಶೋಭಕ್ಕ ಚಳುವಳಿಯಿಂದ ಭಾರೀ ಮುಖಭಂಗ ಅನುಭವಿಸಿದ್ದ ಶೋಭಾ ಅವರಿಗೆ ಈಗ ಮತ್ತೆ ಬಿಜೆಪಿ ಮುಖಂಡರಿಂದಲೇ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಒಂದು ವರದಿ ಇಲ್ಲಿದೆ ನೋಡಿ...
ಹೌದು, ಕಳೆದ ಬಾರಿ ಶೋಭಾ ಕರಂದ್ಲಾಜೆ ಅವರು ಲೋಕಸಭಾ ಚುನಾವಣೆಯಲ್ಲಿ ಮೋದಿ ಹೆಸರಿನಲ್ಲಿ ಗೆದ್ದು ಬೀಗಿದ್ದು ಸುಳ್ಳಲ್ಲ. ಈ ಬಾರಿಯೂ ಮೋದಿ ಹೆಸರಿನಲ್ಲಿ ಗೆಲ್ಲಬಹುದು ಎಂಬ ಯೋಚನೆಯಲ್ಲಿದ್ದ ಶೋಭಾ ಕರಂದ್ಲಾಜೆಗೆ ಬಿಜೆಪಿ ಮುಖಂಡರಿಂದಲೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಹಿಂದೆ ಗೋ ಬ್ಯಾಕ್ ಶೋಭಕ್ಕ ಅಭಿಯಾನದಿಂದ ಮುಖಭಂಗ ಅನುಭವಿಸಿದ್ದ ಶೋಭಾಗೆ ಈಗ ಚಿಕ್ಕಮಗಳೂರಿನ ಬಿಜೆಪಿ ನಗರಸಭೆ ಸದಸ್ಯರೇ ಶಾಕ್ ನೀಡಿದ್ದು, ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಆಪ್ತರಾಗಿರೋ ನಗರಸಭೆ ಸದಸ್ಯರಾದ ರಾಜಶೇಖರ್, ದೇವಾರಾಜ್ ಶೆಟ್ಟಿ, ಮುತ್ತಯ್ಯ, ರವಿಕುಮಾರ್, ಶಿಲ್ಪಾ ರಾಜಶೇಖರ್, ಸುಧೀರ್, ಅಪ್ಸರ್ ಅಹಮ್ಮದ್ ಸೇರಿದಂತೆ ಹತ್ತಕ್ಕೂ ಹೆಚ್ಚು ಬಿಜೆಪಿ ನಗರಸಭೆ ಸದಸ್ಯರು ಶೋಭಾ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಶೋಭಾ ಕರಂದ್ಲಾಜೆ ಅವರು ನಗರಸಭೆ ಆವರಣದಲ್ಲಿ ಸಂಸದರ ಕಚೇರಿಗೆ ಬರೋದಿಲ್ಲ. ಒಬ್ಬರೇ ಒಬ್ಬ ನಗರಸಭೆ ಸದಸ್ಯರನ್ನು ಸೌಜನ್ಯಕ್ಕೂ ಮಾತಾನಾಡಿಸಿಲ್ಲ, ಇಲ್ಲಿಯವರೆಗೂ ಒಂದೇ ಒಂದು ಸಭೆ ನಡೆಸಿಲ್ಲ, ಬಸ್ ಚಾರ್ಜ್ ಹಾಕಿಕೊಂಡು ಬೆಂಗಳೂರಿಗೆ ಹೋಗಿ ಸಂಸದರನ್ನು ಹುಡುಕಲು ನಮ್ಮಿಂದ ಸಾಧ್ಯವಿಲ್ಲ. ಈ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಅವಶ್ಯಕತೆ ಇಲ್ಲ ಎಂದು ಜನ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದು, ಶೋಭಾ ಕರಂದ್ಲಾಜೆ ಅವರು ಈ ಕ್ಷೇತ್ರಕ್ಕೆ ಬೇಡ, ಸ್ಥಳೀಯ ಅಭ್ಯರ್ಥಿಗೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಮುಖಂಡರೇ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಶಾಸಕ ಸಿ.ಟಿ. ರವಿ ಮತ್ತು ಅವರ ಬೆಂಬಲಿಗರು ಬಿಜೆಪಿ ಮುಖಂಡ ಜಯಪ್ರಕಾಶ್ ಹೆಗ್ಡೆ ಅವರ ಪರವಾಗಿ ಪರೋಕ್ಷವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬ ದೊಡ್ಡ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದ್ದು, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಗೊಂದಲ ಸೃಷ್ಟಿಯಾಗುತ್ತಿದೆ. ಇಷ್ಟು ದಿನ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಮಾತ್ರ ಗೋ ಬ್ಯಾಕ್ ಎಂದು ಹೇಳುತ್ತಿದ್ದರು. ಆದರೆ ಈಗ ಬಿಜೆಪಿ ಮುಖಂಡರೇ ನೇರವಾಗಿ ಶೋಭ ಕರಂದ್ಲಾಜೆ ಬೇಡ ಎಂದು ಹೇಳುತ್ತಿರುವುದು ಆಶ್ಚರ್ಯ ಮೂಡಿಸುತ್ತಿದೆ.
ಒಟ್ಟಾರೆಯಾಗಿ ರಾಜ್ಯ ರಾಜಕಾರಣದಲ್ಲೇ ಬ್ಯುಸಿಯಾಗಿ ಈಗ ಕ್ಷೇತ್ರದತ್ತ ಮುಖಮಾಡಿರೋ ಶೋಭಾ ಕರಂದ್ಲಾಜೆಗೆ ಚಿಕ್ಕಮಗಳೂರಿನ ಬಿಜೆಪಿ ಮುಖಂಡರಿಂದಲೇವಿರೋಧ ವ್ಯಕ್ತವಾಗುತ್ತಿದೆ. ಆದರೆ ಬಿಜೆಪಿ ಪಕ್ಷದ ಹೈ ಕಮಾಂಡ್ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.