ಚಿಕ್ಕಮಗಳೂರು: ನಾಲ್ಕು ಜಿಲ್ಲೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಪೂರೈಕೆಗೆ ಸಂಬಂಧಿಸಿದಂತೆ, ಕಾಮಗಾರಿಗಳು ಹಂತ - ಹಂತವಾಗಿ ನಡೆಯುತಿದ್ದು, ತ್ವರಿತವಾಗಿ ಪೂರ್ಣಗೊಳಿಸುವ ಮೂಲಕ ಈ ಭಾಗದ ಜನತೆಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಎನ್ ಆರ್ ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮದ ಬಳಿ, ಭದ್ರಾ ಮೇಲ್ದಂಡೆ ಯೋಜನೆಯ ಪ್ಯಾಕೇಜ್-1 ರ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಅಜ್ಜಂಪುರ, ತರೀಕೆರೆ ಸೇರಿದಂತೆ ಹಲವು ಕಡೆಗಳಲ್ಲಿನ ಕಾಮಗಾರಿಗಳನ್ನು ವೀಕ್ಷಿಸಿದ್ದು, ಉತ್ತಮ ಗುಣಮಟ್ಟದಿಂದ ಕೂಡಿದೆ. ನ್ಯೂನತೆಗಳು ಕಂಡು ಬಂದಿರುವ ಭಾಗಗಳಲ್ಲಿ ಕಾಮಗಾರಿಗಳ ಕುರಿತು ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಪೂರ್ಣ ಗೊಳಿಸುವಂತೆ ಕ್ರಮವಹಿಸಲಾಗುವುದು.
ಈ ಯೋಜನೆಯಿಂದಾಗಿ ಬಯಲು ಸೀಮೆಯ 4 ಜಿಲ್ಲೆಗಳ ಜನತೆ ಹಾಗೂ ರೈತರುಗಳಿಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಸಲು ಸಹಕಾರಿಯಾಗಲಿದೆ. ಮುತ್ತಿನಕೊಪ್ಪ ಪ್ಯಾಕೇಜ್-2 ರ ಯೋಜನೆಗೆ ತುಂಗಾ ನದಿಯಿಂದ 17.4 ಟಿ.ಎಂ.ಸಿ ನೀರನ್ನು ಭದ್ರಾ ಜಲಾಶಯಕ್ಕೆ 2 ಹಂತಗಳಲ್ಲಿ ವರ್ಷದ 4 ತಿಂಗಳ ಕಾಲ ನೀರನ್ನು ಹರಿಸಲಾಗುವುದು. ಈ ಯೋಜನಾ ಕಾಮಗಾರಿಗಳಿಗೆ ರೈತರ ಜಮೀನು ಹಾಗೂ ಖಾಸಗಿ ಸ್ವತ್ತುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದ್ದು ಇವರಿಗೆ ನಿಗದಿತ ಮೊತ್ತವನ್ನು ಪಾವತಿಸಲಾಗಿದೆ ಎಂದರು