ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ಹುಲಿ ಮೀಸಲು ತಣಿಗೆ ಬೈಲು ವಲಯದಲ್ಲಿ ಹುಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಭದ್ರಾ ಅಭಯಾರಣ್ಯದ ಹುಲಿ ಸಂರಕ್ಷಿತ ವ್ಯಾಪ್ತಿಯ ತಣಿಗೆ ಬೈಲು ವಲಯದ ಕಮನದುರ್ಗ ಶಾಂತವೇರಿ ಹಳೆಯ ಮಹಾರಾಜ ಗೆಸ್ಟ್ ಹೌಸ್ ರಸ್ತೆಯ ಶೋಲಾ ಅರಣ್ಯದಲ್ಲಿ 3 ರಿಂದ 4 ವರ್ಷ ಪ್ರಾಯದ ಗಂಡು ಹುಲಿಯೊಂದು ಮೃತಪಟ್ಟಿದೆ.
ಎರಡು ಹುಲಿಗಳ ಕಾದಾಟದಲ್ಲಿ ಹುಲಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಹುಲಿಯ ಪಕ್ಕೆ ಮುರಿದು ಮುಂಗಲಿನಲ್ಲಿ ಹುಲಿ ಕಚ್ಚಿದ ಗುರುತು, ಕೆಲವು ಹಲ್ಲುಗಳು ಮುರಿತವಾಗಿದ್ದು, ಮೈಮೇಲೆ ಆಳವಾಗಿ ಪರಚಿದ ಗುರುತು ಪತ್ತೆ ಆಗಿದೆ.
ಶಿವಮೊಗ್ಗ ವನ್ಯಜೀವಿ ವೈದ್ಯ ವಿನಯ್, ಪ್ರೊಫೆಸರ್ ಜಯರಾಮು ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ, ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದರು.
ಸ್ಥಳಕ್ಕೆ ಭದ್ರಾ ಹುಲಿ ಮೀಸಲು ನಿರ್ದೇಶಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ತಾಕತ್ ಸಿಂಗ್ ರಾಣಾವತ್, ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಂತರ ಹುಲಿಯ ಕಳೇಬರ ಸುಟ್ಟಿದ್ದಾರೆ.