ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದ, ಜಿಲ್ಲೆಯ ಹಲವು ಭಾಗದಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿವೆ.
ಮೂಡಿಗೆರೆ ತಾಲೂಕಿನ ಕೆಂಬತ್ ಮಕ್ಕಿ ಎಂಬ ಗ್ರಾಮದಲ್ಲಿ ರೈತ ರಾಜಣ್ಣ ಎಂಬವರಿಗೆ ಸೇರಿದ್ದ ಸುಮಾರು 6 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ತೋಟ ಸಂಪೂರ್ಣ ನಾಶವಾಗಿದೆ.
ಸುಮಾರು 9 ಎಕರೆ ಜಮೀನಿನಲ್ಲಿ ಬಾಳೆ ಗಿಡಗಳನ್ನು ರಾಜಣ್ಣ ಬೆಳೆದಿದ್ದರು. ಇಂದು ಬೆಳಗ್ಗೆಯಿಂದಲೂ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಬಿರುಗಾಳಿಗೆ ಸಿಲುಕಿ, ಸುಮಾರು ಆರು ಎಕರೆಯಲ್ಲಿ ಬೆಳೆದು ನಿಂತಿದ್ದ 9 ಸಾವಿರಕ್ಕೂ ಅಧಿಕ ಬಾಳೆ ಗಿಡಗಳು ನೆಲಕ್ಕುರುಳಿವೆ.
ಮಳೆಯ ಅವಾಂತರದಿಂದ ಬಾಳೆ ಬೆಳೆ ಕೈಗೆ ಸಿಗದಂತಾಗಿದ್ದು, ಕಷ್ಟಪಟ್ಟು ಹಲವಾರು ತಿಂಗಳುಗಳಿಂದ ಬೆಳೆದಿದ್ದ ಬೆಳೆ ಮಣ್ಣುಪಾಲಾಗಿದೆ. ಈ ಭಾಗದಲ್ಲಿ ಬೀಸುತ್ತಿರುವ ಬಿರುಗಾಳಿಗೆ ರೈತ ರಾಜಣ್ಣನ ಕಣ್ಣ ಮುಂದೆಯೇ ಬಾಳೆ ಗಿಡಗಳು ಮುರಿದು ನೆಲಕ್ಕೆ ಬೀಳುತ್ತಿದ್ದು, ಈ ಘಟನೆಯಿಂದ ಇವರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.