ಚಿಕ್ಕಮಗಳೂರು: ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಶ್ರೀ ಬಾಳೆಹೊನ್ನೂರು ಮಠದಲ್ಲಿ 51 ಅಡಿ ಎತ್ತರದ ರೇಣುಕಾಚಾರ್ಯ ಪ್ರತಿಮೆಗೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಸಿ.ಟಿ. ರವಿ, ಜಗದ್ಗುರು ಶ್ರೀ ರಂಭಾಪುರಿ ಶ್ರೀಗಳು ಶಿಲಾನ್ಯಾಸ ನೆರವೇರಿಸಿದರು.
ರೇಣುಕಾಚಾರ್ಯರ ಶಿಲಾ ಮೂರ್ತಿ ನಿರ್ಮಾಣಕ್ಕೆ ಸರ್ಕಾರದ ಸಹಕಾರ ನೀಡಲಾಗುವುದು ಎಂದು ಶಿಲಾನ್ಯಾಸ ನೆರವೇರಿಸಿದ ಬಳಿಕ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಂತರ ಮಾತನಾಡಿದ ರಂಭಾಪುರಿ ಶ್ರೀಗಳು ವಿಶ್ವ ಬಂಧುತ್ವ, ಸಂದೇಶ ಸಾರಿದ ರೇಣುಕಾಚಾರ್ಯರ ಚಿಂತನೆಗಳು ಸರ್ವ ಧರ್ಮಕ್ಕೂ ಅನ್ವಯಿಸುತ್ತವೆ. ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ 51 ಅಡಿ ಎತ್ತರದ ಶ್ರೀ ರೇಣುಕಾಚಾರ್ಯರ ಶಿಲಾ ಮೂರ್ತಿಯನ್ನು ಇಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ರಾಜ್ಯದ ವಿವಿಧ ಮೂಲೆಗಳ ವಿಶಿಷ್ಟ ಶಿಲ್ಪಿಗಳು ಇದನ್ನು ಕೆತ್ತಲಿದ್ದು, ಈ ಪ್ರತಿಮೆಗೆ ಸುಮಾರು 8 ಕೋಟಿ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ಈ ಮೂರ್ತಿ ನಿರ್ಮಾಣದಿಂದ ಕ್ಷೇತ್ರಕ್ಕೆ ಹೊಸ ಮೆರುಗು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಿನ ಯೋಜನೆಯಂತೆ ಸರ್ಕಾರ, ಮಠ, ಭಕ್ತರು, ದಾನಿಗಳ ನೆರವಿನಿಂದ ಇನ್ನು 2 ವರ್ಷಗಳಲ್ಲಿ ಪ್ರತಿಮೆಯ ಕೆತ್ತನೆ ಕಾರ್ಯ ಮುಗಿಯುವ ವಿಶ್ವಾಸವಿದೆ ಎಂದು ಶ್ರೀ ರಂಭಾಪುರಿ ಮಠದ ಶ್ರೀಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಶಿಲಾನ್ಯಾಸದ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಸಿ ಟಿ ರವಿ, ಸಂಸದ ಬಿ ವೈ ರಾಘವೇಂದ್ರ, ಶಾಸಕ ಟಿ ಡಿ ರಾಜೇಗೌಡ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.