ಚಿಕ್ಕಮಗಳೂರು: ಕಾಫಿನಾಡಿನ 12 ಸಾವಿರಕ್ಕೂ ಅಧಿಕ ಕುಟುಂಬಗಳು ಆಟೋ ನಂಬಿ ಬದುಕುತ್ತಿದ್ದು, ಇದೀಗ ಜಿಲ್ಲಾಧಿಕಾರಿಗಳ ಒಂದು ಆದೇಶ ಆಟೋ ಚಾಲಕರಿಗೆ ತಲೆನೋವಾಗಿ ಪರಿಣಮಿಸಿದೆ. 2018ರಲ್ಲಿ ಆರ್ಟಿಒ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯದಂತೆ ಆಟೋ ಚಾಲಕರಿಗೆ ತಾಲೂಕು ಮಟ್ಟದಲ್ಲಿ ನೀಡಲಾಗುತ್ತಿದ್ದ ಪರ್ಮಿಟ್ ಬದಲಿಗೆ ನಗರ, ಪಟ್ಟಣ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಓಡಿಸಲು ಪರ್ಮಿಟ್ ನೀಡಲು ಮುಂದಾಗಿದೆ.
ಖಾಸಗಿ ಬಸ್ ಮಾಲೀಕರೊಬ್ಬರು ಇದೇ ಆದೇಶವನ್ನ ಜಾರಿ ಮಾಡುವಂತೆ ಕೋರಿ ಜಿಲ್ಲಾ ಸತ್ರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಲಯ ಆರ್ಟಿಒ ನಿರ್ದೇಶನದಂತೆ ಈ ಆದೇಶ ತಕ್ಷಣವೇ ಜಾರಿ ಮಾಡಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿತ್ತು. ಈ ಹಿನ್ನೆಲೆ ಆಟೋ ಚಾಲಕರಿಗೆ ಸಂಕಷ್ಟ ಎದುರಾಗಿದೆ.
ಈ ನಿರ್ಣಯದಿಂದಾಗಿ ಆಟೋ ಚಾಲಕರು ಬೇರೊಂದು ತಾಲೂಕಿಗೆ ಆಟೋ ಚಾಲನೆ ಮಾಡುವುದು ಕಷ್ಟಕರವಾಗಲಿದೆ ಹಾಗೂ ತಾಲೂಕಿನಾದ್ಯಂತ ಸಂಚರಿಸಲು ಸಾಧ್ಯವಾಗದೇ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಆದೇಶದ ವಿರುದ್ಧ ಆಟೋ ಚಾಲಕರು ಆಕ್ರೋಶ ಹೊರಹಾಕಿದ್ದು, ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿ ಆದೇಶ ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಆದೇಶವನ್ನ ಮರುಪರಿಶೀಲಿಸುವಂತೆ ಆಟೋ ಚಾಲಕರು ಅಗ್ರಹಿಸಿದ್ದಾರೆ. ನೂರಾರು ಚಾಲಕರು, ಮಾಲೀಕರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಡಿಸಿಗೆ ಮನವಿ ಸಲ್ಲಿಸಿದ್ದಾರೆ. ಆಟೋ ಚಾಲಕರಿಗೆ ಸ್ಥಳೀಯ ಜನಪ್ರತಿನಿಧಿಗಳು ಸಾಥ್ ನೀಡಿದ್ದು, ಮತ್ತೊಮ್ಮೆ ಆರ್ಟಿಒ ಸಭೆ ನಡೆಸಿ ಈ ಕುರಿತು ನಿರ್ಣಯ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.