ಚಿಕ್ಕಮಗಳೂರು : ಅವನ ಕೆಲಸವೇ ಊರೂರು ಸುತ್ತೋದು. ಹೋದಲ್ಲೆಲ್ಲ ಲಾಡ್ಜ್ ಮಾಡಿ ರಾತ್ರಿ ಎಣ್ಣೆ ಪಾರ್ಟಿ ಮಾಡೋದು, ಬೆಳಗ್ಗೆ ಎಟಿಎಂ ಬಾಗಿಲು ಕಾಯೋದು. ಯಾರಾದರೂ ಎಟಿಎಂನಲ್ಲಿ ದುಡ್ಡು ತೆಗೆಯೋಕೆ ಪರದಾಡಿದವರು ಇವರ ಕಣ್ಣಿಗೆ ಬಿದ್ರೆ ಅವರ ಕಥೆ ಮುಗೀತು ಅಂತಾನೆ. ಕೈಯಲ್ಲಿರುವ ಎಟಿಎಂ ನೋಡಿ ಅದೇ ಬ್ಯಾಂಕಿನ ಮತ್ತೊಂದು ಎಟಿಎಂನೊಂದಿಗೆ ಒಳ ಹೋಗಿ ಸಹಾಯ ಮಾಡುವ ನೆಪದಲ್ಲಿ ಪಿನ್ ಪಡೆದು ಹಣ ಕಳ್ಳತನ ಮಾಡುವುದು ಇವನ ಕಾಯಕವಾಗಿದೆ. ಈ ಐನಾತಿ ಕಳ್ಳ ಈಗ ಕಾಫಿನಾಡ ಖಾಕಿಗಳ ಬಲೆಗೆ ಬಿದ್ದಿದ್ದಾನೆ.
ಈ ಐನಾತಿ ಕಳ್ಳನ ಹೆಸರು ತಂಬಿರಾಜ್. ಮೂಲತಃ ತಮಿಳುನಾಡಿನ ತೇನಿ ಜಿಲ್ಲೆಯವನು. ಎಟಿಎಂ ಮುಂದೆ ಬಾಗಿಲು ಕಾದು, ವೃದ್ಧರು, ಮಹಿಳೆಯರು, ಅನಕ್ಷರಸ್ಥರು ಬಂದರೆ ಅವರ ಎಟಿಎಂ ನೋಡಿ ಅದೇ ಬ್ಯಾಂಕಿನ ಮತ್ತೊಂದು ಎಟಿಎಂ ಹಿಡಿದು ಒಳಹೋಗಿ ಕ್ಷಣಾರ್ಧದಲ್ಲಿ ಎಟಿಎಂ ಬದಲಿಸ್ತಾನೆ. ನಿಮ್ಮ ಎಟಿಎಂ ಸರಿ ಇಲ್ಲ. ಬ್ಯಾಂಕಿಗೆ ಹೋಗಿ ಅಂತ ಕಳಿಸಿ ಅವರಿಂದಲೇ ಪಿನ್ ಪಡೆದು ಅವರ ಕಾರ್ಡ್‍ನಲ್ಲಿ ಹಣ ಡ್ರಾ ಮಾಡ್ತಾನೆ. ಎಟಿಎಂ ಕೈಗೆ ಸಿಕ್ಕ ಕೂಡಲೇ ಇವನು ಮೊದಲು ಹೋಗೋದೆ ಜ್ಯುವೆಲ್ಲರಿ ಶಾಪ್‍ಗೆ. ಅಲ್ಲಿ ಗೋಲ್ಡ್ ಖರೀದಿಸಿ, ದಿನಕ್ಕೆ ಲಿಮಿಟ್ ಇರುವ ಅಷ್ಟು ಹಣವನ್ನೂ ಡ್ರಾ ಮಾಡುತ್ತಾನೆ. ಮೊನ್ನೆ ಚಿಕ್ಕಮಗಳೂರಿನ ಮೂಡಿಗೆರೆಯಲ್ಲೂ ಇದೇ ಕೆಲಸ ಮಾಡಿ ತಗ್ಲಾಕಿಕೊಂಡಿದ್ದಾನೆ.
ಓದಿ: ಕುರಿ ಕಳ್ಳ ಸಾಗಣೆಗೆ ಅಡ್ಡ ಬಂದ ವೃದ್ಧನ ಕೊಲೆ: ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಹಾವೇರಿ ಪೊಲೀಸರು
ಮೂಡಿಗೆರೆಯ ಖಾಕಿಪಡೆಯ ಅತಿಥಿಯಾಗಿರುವ ಕಳ್ಳ ತುಂಬಿರಾಜ್ ತನ್ನೆಲ್ಲಾ ಚಾಲಕಿ ಕಥೆಗಳನ್ನ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಈತನ ಈ ಸಮಾಜ ಸೇವೆಯ ಮುಖವಾಡದಲ್ಲಿ ಬದುಕ್ತಿರುವ ಜೀವನಕ್ಕೆ ವರ್ಷಗಳ ಇತಿಹಾಸವಿದೆ. ಈಗಾಗಲೇ ಚಿಕ್ಕಮಗಳೂರು, ಮೂಡಿಗೆರೆ, ತರೀಕೆರೆ, ಬೆಂಗಳೂರು, ಮೈಸೂರು, ಮಂಡ್ಯ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಅರ್ಧ ಕರ್ನಾಟಕ ಸುತ್ತಿ ಎಲ್ಲ ಕಡೆ ನೂರಾರು ಜನರಿಗೆ ಟೋಪಿ ಹಾಕಿದ್ದಾನೆ.
ಸಹಾಯದ ಮುಖವಾಡದಲ್ಲಿ ತಿಂದು - ಕುಡಿದು ಮಜಾ ಮಾಡ್ತಾ ಬದುಕುತ್ತಿದ್ದಾನೆ. ಈತನಿಂದ 70 ಬ್ಯಾಂಕ್ ಎಟಿಎಂ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದಲ್ಲಿ 7 ಪ್ರಕರಣಗಳು ಬೆಳಕಿಗೆ ಬಂದಿದೆ. ಈತನ ಮೇಲೆ ತಮಿಳುನಾಡಿನಲ್ಲಿಯೂ 11 ಪ್ರಕರಣಗಳು ದಾಖಲಾಗಿವೆ.