ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಕಾಣಸಿಗುತ್ತಿದ್ದ ಅದೆಷ್ಟೋ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ವಿಶೇಷವಾಗಿ ಮಲೆನಾಡು ಭಾಗದಲ್ಲಿ ಮಳೆಗಾಲ ಆರಂಭದ ಸಮಯದಲ್ಲಿ ಆಚರಿಸಿಕೊಂಡು ಬರುತ್ತಿದ್ದ ಕ್ರೀಡೆಗಳು ಇಲ್ಲದಂತಾಗುತ್ತಿವೆ. ರಾಜ್ಯದ ಪ್ರಸಿದ್ಧ ಹಾಗೂ ಚಿರಪರಿಚಿತ ಸಂಸ್ಥೆಯೊಂದು ಇಂತಹ ಗ್ರಾಮೀಣ ಕಲೆಗಳನ್ನ ಉಳಿಸುವ ಪ್ರಯತ್ನ ಮಾಡಿದೆ.
ಹೌದು, ಒಂದು ಕಡೆ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ, ಮತ್ತೊಂದು ಕಡೆ ಭತ್ತದ ನಾಟಿಗೆ ಸಿದ್ಧವಾಗಿ ನಿಂತಿರುವ ನೂರಾರು ಎಕರೆಯ ಕೆಸರು ಗದ್ದೆ. ಇನ್ನೊಂದು ಭಾಗದಲ್ಲಿ ಕೆಸರು ಗದ್ದೆಯಲ್ಲಿಯೇ ಮಲೆನಾಡಿನ ಉಡುಗೆ ತೊಟ್ಟು ಗದ್ದೆಯಲ್ಲಿ ನೃತ್ಯ ಮಾಡುತ್ತಿರುವ ನೂರಾರು ಮಹಿಳೆಯರು, ಪುರುಷರು ಹಾಗೂ ಮಕ್ಕಳು. ಈ ಮಳೆಗಾಲದಲ್ಲಿ ಈ ರೀತಿಯ ಅದ್ಭುತ ಸಾಂಸ್ಕೃತಿಕ ವೈಭವ ಕಂಡು ಬಂದಿದ್ದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ.
ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಮಲೆನಾಡಿನಲ್ಲಿ ಆಷಾಢ ಮಾಸದ ಆಟಿಡೊಂಜಿ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಮಲೆನಾಡಿನ ಸ್ಥಳೀಯರು ಕೆಸರು ಗದ್ದೆಯಲ್ಲಿ ಸಂಭ್ರಮಿಸಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅದ್ದೂರಿಯಾಗಿ ಕಾರ್ಯಕ್ರಮವನ್ನು ಆಚರಣೆ ಮಾಡಿ ಕೆಸರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಮಲೆನಾಡಿನ ಆಟಿಡೊಂಜಿಗೆ ಹಬ್ಬಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ಕಲಾವಿದರು ಸಹ ಕೈ ಜೋಡಿಸಿ, ಗ್ರಾಮೀಣ ಕ್ರೀಡೆಗಳಾದ ಕೆಸರುಗದ್ದೆ ಓಟ, ಹಗ್ಗಾಜಗ್ಗಾಟ, ಮಡಿಕೆ ಒಡೆಯುವ ಸ್ಫರ್ಧೆ, ಚೇರ್ ಆಟ, ಕಬಡ್ಡಿ ಸೇರಿದಂತೆ ಹಲವಾರು ಕ್ರೀಡೆಗಳನ್ನು ಆಯೋಜನೆ ಮಾಡಲಾಗಿತ್ತು.