ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲ ಗೃಹಿಣಿ ಶ್ವೇತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಗೃಹಿಣಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಪತಿಯೇ ಪತ್ನಿಗೆ ಊಟದಲ್ಲಿ ಸೈನೈಡ್ ಬೆರೆಸಿ ನೀಡಿದ್ದು, ಅದನ್ನು ಸೇವಿಸಿ ಪತ್ನಿ ಸಾವನ್ನಪ್ಪಿದ್ದಾಗಿ ಆರೋಪಿ ಪತಿ ಬಾಯ್ಬಿಟ್ಟಿದ್ದಾನೆ ಎಂಬ ಮಾಹಿತಿ ಹೊರ ಬಿದ್ದಿದೆ.
ಈ ಬಗ್ಗೆ ಮಾತನಾಡಿರುವ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ, ಮೂಡಿಗೆರೆಯ ದೇವವೃಂದ ಸಮೀಪದ ಹಕ್ಕೇರುದ್ದಿ ಗ್ರಾಮದಲ್ಲಿ ನಡೆದಿದ್ದ ಗೃಹಿಣಿ ಕೊಲೆ ಪ್ರಕರಣ ಸಂಬಂಧ ಆರೋಪಿ ಪತಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಎಸ್ಪಿ ಹೇಳಿದ್ದಿಷ್ಟು: "ಗೋಣಿಬೀಡು ಪೊಲೀಸ್ ಠಾಣೆಗೆ ಚನ್ನೋಜಿ ರಾವ್ ಎಂಬುವವರು ಗೃಹಿಣಿ ಶ್ವೇತಾರ ಎಂಬುವರ ಕೊಲೆ ಪ್ರಕರಣ ಸಂಬಂಧ ಆಕೆಯ ಪತಿ ಮತ್ತು ಕುಟುಂಬಸ್ಥರು ವಿರುದ್ಧ ದೂರು ನೀಡಿದ್ದರು. ಈ ಕುರಿತು ಸಂಬಂಧಪಟ್ಟ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿಕೊಂಡ ಗೋಣಿಬೀಡು ಇನ್ಸ್ಪೆಕ್ಟರ್ ಸೋಮೇಗೌಡರು, ಶ್ವೇತಾರ ಮೃತದೇಹವನ್ನು ಸರ್ಕಾರ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆಯನ್ನು ಮಾಡಿಸಿ ತನಿಖೆಯನ್ನು ಕೈಗೊಂಡಿದ್ದಾರೆ. ಪ್ರಕರಣ ಸಂಬಂಧ ಮೃತ ಶ್ವೇತಾ ಅವರ ಪತಿ ದರ್ಶನ್ ಅನ್ನು ಬಂಧಿಸಿ ತನಿಖೆ ಮುಂದುವರೆಸಿದ್ದೇವೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತೇವೆ" ಎಂದರು.
"ಶ್ವೇತಾ ಮತ್ತು ದರ್ಶನ್ ಮದುವೆಯಾಗಿ 7 ವರ್ಷಗಳಾಗಿವೆ. ಇಬ್ಬರು ಲ್ಯಾಬ್ ಟೆಕ್ನಿಷಿಯನ್ಸ್ಗಳಾಗಿದ್ದು, ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಲ್ಯಾಬ್ಗಳನ್ನು ಹೊಂದಿದ್ದರು. ದರ್ಶನ್ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿರುವ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಜಗಳ ನಡುಯುತ್ತಿತ್ತು. ಅವರಿಬ್ಬರು ಡಿ.6ನೇ ತಾರೀಖು ಗೋಣಿಬೀಡು ವ್ಯಾಪ್ತಿಯ ದೇವವೃಂದಕ್ಕೆ ಬಂದಿದ್ದರು. ಇಲ್ಲಿಯೂ ಇಬ್ಬರ ನಡುವೇ ಜಗಳವಾಗಿತ್ತು" ಎಂದು ಹೇಳಿದರು.
"ಈ ವೇಳೆ ಊಟದಲ್ಲಿ ಸೈನೈಡ್ ಬೆರಸಿ ತಿನ್ನಿಸಿ ಕೊಲೆ ಮಾಡಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ತನಿಖೆ ಮಾಡಿದಾಗ, ತನಿಖೆಯಲ್ಲಿಯೂ ಈ ಅಂಶಗಳು ಪತ್ತೆಯಾಗಿದೆ. ಆರೋಪಿ ಕೊಲೆ ಮಾಡಲು ಸೈನೈಡ್ ಬಳಸಿದ್ದಾರೆಯೇ ಎಂಬುದನ್ನು ತಿಳಿಯಲು ಅದರ ಮಾದರಿಯನ್ನು ಎಫ್ಎಸ್ಎಲ್ಗೆ ರವಾನಿಸಿ ಮತ್ತು ವೈದ್ಯರ ಅಭಿಪ್ರಾಯವನ್ನು ಪಡೆದುಕೊಂಡು ದೃಢಪಡಿಸಿಕೊಳ್ಳಬೇಕಾಗುತ್ತದೆ. ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ತಂಡ ಮತ್ತು ಸೋಕೋ (ಸೀನ್ ಆಫ್ ಕ್ರೈಂ ಆಫೀಸರ್ಸ್) ಭೇಟಿ ನೀಡಿ ವೈಜ್ಞಾನಿಕ ತನಿಖೆ ಕೈಗೊಂಡಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಚಿಕ್ಕಮಗಳೂರು: ಗೃಹಿಣಿ ಅನುಮಾನಾಸ್ಪದ ಸಾವು.. ಪತಿ ವಿರುದ್ಧ ಕೊಲೆ ಆರೋಪ
ರಾಮನಗರದಲ್ಲಿ ಮಹಿಳೆ ಅನುಮಾನಾಸ್ಪದ ಸಾವು(ರಾಮನಗರ): ಇತ್ತೀಚೆಗೆ, ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿದ್ದ ಘಟನೆ ರಾಮನಗರದಲ್ಲಿ ನಡೆದಿತ್ತು. ಮೃತ ಮಹಿಳೆಯನ್ನು ಕಮಲಾಬಾಯಿ ಎಂದು ಗುರುತಿಸಲಾಗಿತ್ತು. ಪ್ರಕರಣ ಸಂಬಂಧ ಮೃತರ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದರು.