ಚಿಕ್ಕಮಗಳೂರು: ನೂತನವಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿಲ್ಲೆಯ ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ಅವರನ್ನು ಕಡೂರು ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಕಡೂರಿಗೆ ಆಗಮಿಸಿದ ಅವರನ್ನು ಕಡೂರು ಗಡಿಯಿಂದಲೇ ಕಾರ್ಯಕರ್ತರು ನೂರಾರು ಬೈಕ್ಗಳಲ್ಲಿ ಕಾರಿನ ಮುಂದೆ ಚಲಾಯಿಸುತ್ತ ಕರೆ ತಂದರು. ಕಡೂರಿನ ವೆಂಕಟೇಶ್ವರ ದೇಗುಲದ ಎದುರು ತಮ್ಮ ಪ್ರಚಾರ ವಾಹನ ಬೆಳ್ಳಿ ರಥ ಏರಿದ ಬೆಳ್ಳಿ ಪ್ರಕಾಶ್ ಅಭಿಮಾನಿಗಳೆಡೆ ಕೈಬೀಸಿದರು.
ಓದಿ: ಕಾರು ತೆಗೆಸಿದ್ದಕ್ಕೆ ಪೊಲೀಸ್ ಅಧಿಕಾರಿಗೆ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಆವಾಜ್!
ಅಲ್ಲಿಂದ ಬಿಜೆಪಿ ಕಾರ್ಯಾಲಯದ ತನಕ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ನಂತರ ಮಾತನಾಡಿದ ಶಾಸಕ ಬೆಳ್ಳಿ ಪ್ರಕಾಶ್ ಅವರು ಸಹಕಾರ ಕ್ಷೇತ್ರದಲ್ಲಿ ಅಫೆಕ್ಸ್ ಬ್ಯಾಂಕ್ ತಾಯಿಯಿದ್ದಂತೆ. ಅದರ ಅಧ್ಯಕ್ಷ ಸ್ಥಾನ ಬಹುದೊಡ್ಡ ಜವಾಬ್ದಾರಿಯಾಗಿದ್ದು, ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಆ ಸ್ಥಾನವನ್ನು ನಿರ್ವಹಿಸುತ್ತೇನೆ ಎಂದು ಹೇಳಿದರು.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯ ಅರಿವಿದೆ. ಸಹಕಾರಿ ಕ್ಷೇತ್ರದಲ್ಲಿ ಈ ಬ್ಯಾಂಕ್ನ ಪಾತ್ರವೇ ಬಹುಮುಖ್ಯ. ರಾಜ್ಯ ವ್ಯಾಪ್ತಿ ಕಾರ್ಯಕ್ಷೇತ್ರ ನನ್ನದಾಗಿದ್ದರೂ ಕಡೂರು ಕ್ಷೇತ್ರದ ಶಾಸಕನಾಗಿ ಇರುವ ಜವಾಬ್ದಾರಿಯನ್ನು ಕಡೆಗಣಿಸದೇ ಹೆಚ್ಚಿನ ಗಮನ ಹರಿಸುತ್ತೇನೆ. ಶಾಸಕನಾಗಿ ನನ್ನ ಮೊದಲ ಆಧ್ಯತೆಯೇ ಕ್ಷೇತ್ರದ ಅಭಿವೃದ್ಧಿಯಾಗಿತ್ತು. ಅದಕ್ಕೆ ಪೂರಕವಾಗಿ ಈ ಜವಾಬ್ದಾರಿಯುತ ಹುದ್ದೆ ದೊರೆತಿದೆ ಎಂದು ಹೇಳಿದರು.