ಚಿಕ್ಕಮಗಳೂರು: ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟಿಯಲ್ಲಿ ನಾಗರ ಹಾವು ಪತ್ತೆಯಾಗಿದ್ದು, ಸ್ವಲ್ಪ ಕಾಲ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯಲ್ಲಿರುವ ಪುಷ್ವಗಿರಿ ಲೇಔಟ್ನಲ್ಲಿರುವ ನಿವೃತ್ತ ಸಬ್ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ಅವರ ಮನೆಯ ಮುಂದೆ ಸ್ಕೂಟಿ ನಿಲ್ಲಿಸಿದ್ದರು. ಸ್ಕೂಟಿ ತೆಗೆಯಲು ಮನೆಯಿಂದ ಹೊರಗೆ ಬಂದ ಕೃಷ್ಣಮೂರ್ತಿ ಅವರ ಸೊಸೆ ನಾಗರ ಹಾವು ಮೂರು ಕಪ್ಪೆಗಳನ್ನು ನುಂಗುತ್ತಿರುವುದನ್ನು ನೋಡಿ ಭಯದಿಂದ ಒಳ ಹೋಗಿದ್ದಾರೆ. ನಂತರ ಮನೆಯವರು ಬಂದು ಹಾವು ಎಲ್ಲಿ ಹೋಗಿದೆ ಎಂದು ಹುಡುಕಾಡಿದಾಗ ಸ್ಕೂಟಿಯ ಮುಂಭಾಗದ ಸಣ್ಣ ರಂಧ್ರದ ಒಳಗೆ ಹೋಗಿದೆ ಎಂದು ಗೊತ್ತಾಗಿದೆ.
ಮನೆಯವರು ಬೈಕ್ ಮೆಕಾನಿಕ್ನನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಹಾವು ಇರುವುದರಿಂದ ಮುಂಭಾಗ ಬಿಚ್ಚುವುದಿಲ್ಲ ಎಂದು ಆತ ಹಿಂದುರುಗಿದ್ದಾನೆ. ನಂತರ ಉರಗ ತಜ್ಞ ಸ್ನೇಕ್ ನರೇಶ್ ಅವರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಮೊದಲು ಸ್ನೇಕ್ ನರೇಶ್ ಹಾವು ಹಿಡಿಯಲು ಎಷ್ಟೇ ಪ್ರಯತ್ನ ಮಾಡಿದರೂ ನಾಗರ ಹಾವು ಹೊರ ಬರದ ಕಾರಣ ಪೈಪ್ ಮೂಲಕ ದ್ವಿಚಕ್ರ ವಾಹನದ ಮುಂಭಾಗಕ್ಕೆ ನೀರು ಬಿಟ್ಟಿದ್ದಾರೆ.
ನೀರಿನ ರಭಸಕ್ಕೆ ಹಾವು ನಿಧಾನವಾಗಿ ಹೊರ ಬಂದಿದೆ. ಹಾವನ್ನು ಹಿಡಿದು ಕೆಲ ಕ್ಷಣ ಸ್ಥಳದಲ್ಲಿಯೇ ಅದರ ಜೊತೆ ಆಟವಾಡಿ ಸುರಕ್ಷಿತವಾಗಿ ಸ್ಥಳೀಯ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.