ಚಿಕ್ಕಮಗಳೂರು: ಐಎಂಎ ನಕಲಿ ಸಂಸ್ಥೆಯ ಮಾದರಿಯಲ್ಲೇ ಬಿಟ್ ಕಾಯಿನ್ ಮತ್ತು ಐ ಕಾಯಿನ್ ಎಂಬ ನಕಲಿ ಸಂಸ್ಥೆಗಳು ಹಣ ದಡಲ್ ಮಾಡೋದಾಗಿ ಹೇಳಿ ವಂಚಸಿರುವ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ. ಸದ್ಯ ಹಣ ಕಳೆದುಕೊಂಡ ಜನರು ನಗರ ಠಾಣೆಯಲ್ಲಿ ದೂರು ನೀಡುತ್ತಿದ್ದು, ವಂಚನೆಗೊಳಗಾದವರು ಕಣ್ಣುಬಾಯಿ ಬಿಡುವಂತಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.
ಮಂಗಳೂರು ಮೂಲದ ಐ ಕಾಯಿನ್ ಮತ್ತು ಬಿಟ್ ಕಾಯಿನ್ ಸಂಸ್ಥೆಗೆ ಹಣ ಡಬಲ್ ಮಾಡಿಕೊಡುತ್ತಾರೆ ಎಂದು ನಂಬಿ ಹಣ ಹಾಕಿದವರು ವಂಚನೆಗೊಳಗಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಹಾಗೂ ಜಿಲ್ಲೆಯ ಮೂಡಿಗೆರೆ, ಬೇಲೂರು ಮತ್ತು ಹಾಸನದ ಮಂದಿ ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡು ಕಂಗಲಾಗಿದ್ದಾರೆ. ಡಬಲ್ ಹಣದ ಆಸೆಗೆ ಹಣ ಹಾಕಿದವರಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಾಗಿದ್ದಾರೆ ಎಂದು ತಿಳಿದುಬಂದಿದೆ. ಮಗಳ ಮದುವೆ, ಸ್ವಂತ ಮನೆ, ಮಕ್ಕಳ ವಿದ್ಯಾಭ್ಯಾಸ ಇತ್ಯಾದಿಗಳಿಗಾಗಿ ಹಣ ಹಾಕಿದ ಬಡವರ್ಗದ ಜನರು ಮೋಸದಿಂದ ಕಂಗೆಟ್ಟಿದ್ದಾರೆ. ಇನ್ನೂ ಗಂಡ ದುಡಿಯುತ್ತಿಲ್ಲ ಎಂದು ಆಟೋ ಕೊಡಿಸಲು ಮನೆಯಲ್ಲಿದ್ದ ಒಡವೆ ಅಡವಿಟ್ಟು ಹಣ ಹಾಕಿದ ಬಡ ಮಹಿಳೆ ಸ್ಥಿತಿಯಂತೂ ಶೋಚನಿಯವಾಗಿದೆ.
ರುಕ್ಸಿದಾ ಬಾನು ಮತ್ತು ತಂಡ ಈ ಸಂಸ್ಥೆ ಮೂಲಕ ಸಾಮನ್ಯರಿಂದ ಹಣ ಹಾಕಿಸಿಕೊಂಡಿದ್ದು, ಈ ಬಗ್ಗೆ ವಿಚಾರಿಸಿದರೆ ಯಾವುದೇ ಸೂಕ್ತ ಮಾಹಿತಿ ನೀಡುತ್ತಿಲ್ಲ. ಸುಮಾರು ಎರಡರಿಂದ ಮೂರು ಸಾವಿರ ಜನ ಈ ಸಂಸ್ಥೆಯಲ್ಲಿ ಹಣ ಹಾಕಿದ್ದು, ಅಂದಾಜು 5 ಕೋಟಿಗೂ ಅಧಿಕ ಹಣ ಲೂಟಿಯಾಗಿದೆ ಎಂದು ಅಂದಾಜಿಸಲಾಗಿದೆ. ಈ ವರೆಗೆ ನಗರ ಠಾಣೆಯಲ್ಲಿ 100 ಕ್ಕೂ ಹೆಚ್ಚು ಪ್ರಕರಣಗಳು ಸಂಸ್ಥೆಯ ವಿರುದ್ಧ ದಾಖಲಾಗಿವೆ. ಸದ್ಯ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದು, ಜೈಲು ವಾಸದಲ್ಲಿದ್ದಾರೆ.