ಚಿಕ್ಕಮಗಳೂರು: ಸೂಪರ್ ಕಾಪ್, ಜನ ಮೆಚ್ಚಿದ ಅಧಿಕಾರಿ ಎಂದೇ ಜನ ಮೆಚ್ಚುಗೆ ಗಳಿಸಿದ್ದ ಅಣ್ಣಾಮಲೈ, ಜನ ಸ್ನೇಹಿ ಪೊಲೀಸ್ ಅಧಿಕಾರಿಗಳಲ್ಲಿ ಪ್ರಮುಖರು. ಹೀಗಾಗಿ ಜಿಲ್ಲೆಯ ಜನತೆ ಅಣ್ಣಾಮಲೈ, ಪೊಲೀಸ್ ಅಧಿಕಾರಿಯಾಗೇ ಮುಂದುವರಿಯಬೇಕೆಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
ಕಳ್ಳಕಾಕರಿಗೆ ಸಿಂಹಸ್ವಪ್ನರಾಗಿದ್ದ ಇವರು, ಜತೆ ಜತೆಗೆ ಸಾಮಾಜಿಕ ಕಾರ್ಯಗಳಲ್ಲೂ ಎತ್ತಿದ ಕೈ. ಹತ್ತಾರೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಜಿಲ್ಲೆಯಲ್ಲಿ ಮನೆ ಮಾತಾಗಿದ್ದರು. ಸಾಕಷ್ಟು ಕುಟುಂಬ ಕಲಹ ಪ್ರಕರಣಗಳನ್ನ ಸರಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಏಕೆ ತೂಕ ಇಳಿಸಿಕೊಂಡು ಬಂದ ಪೊಲೀಸ್ ಸಿಬ್ಬಂದಿಗೆ ನೀವು ಕೇಳಿದ ಜಾಗಕ್ಕೆ ವರ್ಗಾವಣೆ ಎಂಬ ಹೊಸ ನಿಯಮ ಜಾರಿ ತಂದು ಅನುಷ್ಠಾನ ಗೊಳಿಸಿದ್ದು ಇಲಾಖೆಯಲ್ಲಿ ಭಾರೀ ಸುದ್ದಿ ಮಾಡಿತ್ತು.
ಇನ್ನು ಮರಗಳ ದಂಧೆ ಕೋರರಿಗೆ ಕಡಿವಾಣ ಹಾಕಿದ್ದಲ್ಲದೇ, ಜಿಲ್ಲೆಯಲ್ಲಿ ದತ್ತಾಪೀಠ ಉತ್ಸವ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಂಡಿದ್ದು ಇವರ ದಕ್ಷತೆಗೆ ಹಿಡಿದ ಕೈಗನ್ನಡಿ. ಇದೀಗ ಅವರ ಸ್ಥಾನಕ್ಕೆ ರಾಜೀನಾಮೇ ನೀಡಿರುವ ವಿಚಾರ ತಿಳಿದು ಚಿಕ್ಕಮಗಳೂರಿನಲ್ಲಿರುವ ಅವರ ಅಭಿಮಾನಿಗಳು ದಿಕ್ಕು ತೋಚದಾಗಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ಕೆಲಸಕ್ಕೆ ರಾಜೀನಾಮೆ ನೀಡಬಾರದು. ಅವರ ಅವಶ್ಯಕತೆ ಪೊಲೀಸ್ ಇಲಾಖೆಗೆ ತುಂಬಾ ಇದೆ. ಅವರು ಅದೇ ಸ್ಥಾನದಲ್ಲಿ ಮುಂದುವರೆಯಬೇಕು ಎಂದು ಮನವಿ ಮಾಡುತ್ತಿದ್ದಾರೆ.