ಚಿಕ್ಕಮಗಳೂರು:ಜಿಲ್ಲೆಯ, ಮೂಡಿಗೆರೆ ತಾಲೂಕಿನಲ್ಲಿ ಪ್ರವಾಸಿ ತಾಣಗಳ ಬೆಟ್ಟವೇರಲು, ಅರಣ್ಯ ಇಲಾಖೆಯಿಂದ ಹಣ ವಸೂಲಿ ಮಾಡುತ್ತಿದೆ ಎಂದು ಸ್ಥಳೀಯರು,ಹಾಗೂ ಪ್ರವಾಸಿಗರು ಗಂಭೀರ ಆರೋಪ ಮಾಡಿ, ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈರಾಪುರದ ಸಮೀಪವಿರುವ, ಎತ್ತಿನಭುಜ ಬೆಟ್ಟವೇರಲು ನೂರಾರು ಪ್ರವಾಸಿಗರು ಹಾಗೂ ಸ್ಥಳೀಯರು ಪ್ರತಿನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಈ ಬೆಟ್ಟವೇರಲು ಬರುವಂತಹ ಜನರಿಂದ ಅರಣ್ಯ ಇಲಾಖೆಯ ಸಿಬ್ಬಂದಿ, ಹಣ ವಸೂಲಿಗೆ ಮುಂದಾಗಿದ್ದಾರೆಂದು ಆರೋಪಿಸಿ ಸ್ಥಳೀಯರು, ಪ್ರವಾಸಿಗರು ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆಯ ಸಿಬ್ಬಂದಿ ಎತ್ತಿನಭುಜ ಬೆಟ್ಟ ಹತ್ತಲು 250 ರೂಪಾಯಿ ಹಣ ವಸೂಲಿ ಮಾಡುತ್ತಿದೆ. ಇಲಾಖೆಯೂ ಪ್ರವಾಸಿಗರಿಗೆ ಯಾವುದೇ ಸವಲತ್ತುಗಳನ್ನು ನೀಡದೆ ಹಾಗೂ ಬೆಟ್ಟವನ್ನು ಅಭಿವೃದ್ಧಿಗೊಳಿಸದೇ ಹಣ ಕೀಳಲು ಮುಂದಾಗಿದ್ದು, ಕನಿಷ್ಠ ಮೂಲಭೂತ ಸೌಲಭ್ಯ ಈ ಭಾಗದಲ್ಲಿ ಇಲ್ಲ. ನಾವು ಏತಕ್ಕಾಗಿ ಹಣ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಅರಣ್ಯ ಇಲಾಖೆ ವಿರುದ್ಧ ಚಾರಣಿಗರು, ಸ್ಥಳೀಯರು ನಡೆಸಿದ ಪ್ರತಿಭಟನೆ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ತರಾಟೆ ತೆಗೆದುಕೊಂಡ ಸಂದರ್ಭದಲ್ಲಿ, ಹಣ ವಸೂಲಿ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇತ್ತ ಅರಣ್ಯ ಇಲಾಖೆಯ ಸಿಬ್ಬಂದಿ ಅವರ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡದೆ ಮೌನಕ್ಕೆ ಶರಣಾಗಿದ್ದರು.