ಚಿಕ್ಕಮಗಳೂರು : ಹಲವು ವರ್ಷಗಳ ಕಾಲ ಬಿಸಿಲು-ಮಳೆ ಎನ್ನದೇ, ಹೊಟ್ಟೆ-ಬಟ್ಟೆ ಕಟ್ಟಿ, ಕಷ್ಟಪಟ್ಟು ಒಂದೂವರೆ ಎಕರೆ ಜಮೀನಲ್ಲಿ ಅಡಕೆ ತೋಟ ಮಾಡಿದ ಕುಟುಂಬಕ್ಕೆ ಈಗ ಮರ್ಮಾಘಾತವಾಗಿದೆ.
ಓದಿ: ಕಣಿವೆ ನಾಡಿನಲ್ಲಿ ಬ್ರೇಕ್ ಫೇಲ್, ಕಂದಕಕ್ಕೆ ಉರುಳಿ ಬಿದ್ದ ಮಿನಿ ಬಸ್: ನಾಲ್ವರ ಸಾವು!
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬಳ್ಳಾವರ ಗ್ರಾಮದ ಸರ್ವೇ ನಂಬರ್ 37/4, 37/1ರಲ್ಲಿ ಶಿವಣ್ಣ ಎಂಬುವರು ತನ್ನ ಜಮೀನಿನಲ್ಲಿ 10 ವರ್ಷದಿಂದ ಅಡಿಕೆ ಬೆಳೆದಿದ್ದಾರೆ. ಆದರೆ, ಕಾಲುದಾರಿ ನೆಪದಲ್ಲಿ ತೋಟದ ಮಧ್ಯೆ 45ಕ್ಕೂ ಹೆಚ್ಚು ಅಡಿಕೆ ಮರಗಳನ್ನ ಕಡಿದಿದ್ದಾರೆಂದು ಶಿವಣ್ಣ ಆರೋಪಿಸಿದ್ದಾರೆ.
ನಕ್ಷೆ ಪ್ರಕಾರ ನನ್ನ ತೋಟದ ತುದಿಯಲ್ಲಿ ದಾರಿ ಇದೆ. ಆದರೆ, ನನ್ನ ತೋಟದ ಮಧ್ಯೆಯೇ ಕಾಲುದಾರಿ ಇದೆ ಎಂದು ಅಡಿಕೆ ಮರಗಳನ್ನ ಕಡಿಯಲಾಗಿದೆ. ನನ್ನ ಬಳಿ ಈ ಜಮೀನಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳಿವೆ. ಆದರೂ, ಏಕಾಏಕಿ ಕಷ್ಟಪಟ್ಟು ಬೆಳೆದಿದ್ದ ಅಡಿಕೆ ಮರಗಳನ್ನ ಕಡಿಯಲಾಗಿದೆ. ನಮಗೆ ನ್ಯಾಯ ಕೊಡಿ, ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಈ ಕುಟುಂಬ ಕಣ್ಣೀರು ಹಾಕುತ್ತಿದೆ.
ತಮ್ಮ ಜಮೀನಿನ ಪಕ್ಕದ ಜಾಗವನ್ನ ವ್ಯಕ್ತಿಯೊಬ್ಬರು ನಿವೇಶನ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕೆ ನಮ್ಮ ಜಮೀನನ್ನೂ ನೀಡುವಂತೆ ಕೇಳಿಕೊಂಡಿದ್ದರು. ನಾನು ಕೊಡಲು ನಿರಾಕರಿಸಿದ್ದಕ್ಕೆ ಹೀಗೆ ಮಾಡಿದ್ದಾರೆ ಎಂದೂ ಶಿವಣ್ಣ ಗಂಭೀರ ಆರೋಪ ಮಾಡುತ್ತಿದ್ದಾರೆ.
ಹಗಲು ರಾತ್ರಿ ಕಷ್ಟಪಟ್ಟು ಬೆಳೆದಿದ್ದ 45 ಅಡಿಕೆ ಮರಗಳ ಬುಡಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದು, ಈ ಮರಗಳನ್ನ ಮಕ್ಕಳಂತೆ ಸಾಕಿ, ಪೋಷಿಸಿದ್ದ ಕುಟುಂಬಕ್ಕೆ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆಂದು ಶಿವಣ್ಣ ಕುಟುಂಬ ಆರೋಪ ಮಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಗಂಭೀರ ತನಿಖೆ ನಡೆಸಬೇಕಿದೆ.