ಚಿಕ್ಕಮಗಳೂರು: ಕಳಪೆ ಕಾಮಗಾರಿ ಮಾಡಿ ಅಥವಾ ಒಂದೇ ಕಾಮಗಾರಿಗೆ ಎರಡೆರೆಡು ಬಾರಿ ಬಿಲ್ ಹಾಕಿಸಿ ಮೋಸ ಮಾಡಿದ್ದನ್ನು ನೋಡಿದ್ದೇವೆ. ಆದ್ರೆ ಯಾವುದೇ ಕೆಲಸ ಮಾಡದೇ ಸರ್ಕಾರಿ ಆಟದ ಮೈದಾನವನ್ನು ತೋರಿಸಿ ಹೆಲಿಪ್ಯಾಡ್ ನಿರ್ಮಿಸಿದ್ದೇವೆ, ರಸ್ತೆ ನಿರ್ಮಿಸಿದ್ದೇವೆ ಎಂದು ದಾಖಲೆ ತೋರಿಸಿ ಸರ್ಕಾರದ ದುಡ್ಡನ್ನು ನುಂಗಿದ್ದಾರೆ ಎನ್ನಲಾದ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಹೌದು, ಇದು ಹೈಟೆಕ್ ಹೆಲಿಪ್ಯಾಡ್, ಹೆಲಿಪ್ಯಾಡ್‍ನಿಂದ ವಿಐಪಿಗಳು ಹೋಗೋಕೆ ಇರುವ ರಸ್ತೆ, ಶೌಚಾಲಯ, ಜನರು ವಿಐಪಿಗಳ ಮೇಲೆ ಬೀಳಬಾರದೆಂದು ತಡೆಯಲು ಇರುವ ಬ್ಯಾರಿಕೇಡ್ ಇದು. ಹೀಗೆ ಎಲ್ಲಾ ಕೆಲಸಗಳನ್ನು ಈ ಗ್ರೌಂಡ್ನಲ್ಲಿ ಮಾಡಿಸಿದ್ದೇವೆ ಅಂತಾ ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸರ್ಕಾರಕ್ಕೆ ಟೋಪಿ ಹಾಕಿದ್ದಾರೆಂದು ತಿಳಿದುಬಂದಿದೆ.
ಸರ್ಕಾರಕ್ಕೆ ಮೋಸ ಮಾಡಿ 20 ಲಕ್ಷ ರೂ. ಹಣವನ್ನ ಜೇಬಿಗಿಳಿಸಿದ್ದಾರೆ. ಚಿಕ್ಕಮಗಳೂರು ನಗರದ ಐ.ಡಿ.ಎಸ್.ಜಿ. ಕಾಲೇಜಿನ ಹಿಂಭಾಗ ಹೆಲಿಪ್ಯಾಡ್, ರೋಡ್, ಶೌಚಾಲಯ, ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದೇವೆಂದು ಲೆಕ್ಕ ತೋರಿಸಿ ಹಣ ಲಪಟಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಾಸ್ತವವಾಗಿ ಇಲ್ಲಿ ಏನೂ ಆಗಿಲ್ಲ. ಬಿಳಿ ಬಣ್ಣದಲ್ಲಿ ರೌಂಡ್ ಮಾರ್ಕ್ ಹಾಗೂ ಹೆಚ್ ಮಾರ್ಕ್ ಹಾಕಿರೋದು ಬಿಟ್ರೆ ಈ ಮೈದಾನದಲ್ಲಿ ಬೇರೇನೂ ಕಾಣಿಸುತ್ತಿಲ್ಲ.
ಓದಿ: ರಾಹುಲ್ ಗಾಂಧಿಗೆ ಚಿಕಿತ್ಸೆಯ ಅಗತ್ಯವಿದೆ: ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯ
ದಾಖಲೆಗಳಲ್ಲಿ ಮಾತ್ರ ಹೈಟೆಕ್ ಹೆಲಿಪ್ಯಾಡ್ ಮಾಡಿದ್ದೇವೆ ಅಂತಾ ನಮೂದಿಸಿದ್ದನ್ನು ಕಂಡ ಸ್ಥಳೀಯರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಆರ್.ಟಿ.ಐ. ಅಡಿ ಅರ್ಜಿ ಹಾಕಿ ಮಾಹಿತಿ ಹಕ್ಕಲ್ಲಿ ಮಾಹಿತಿ ಕೇಳಿದಾಗ ಆಗ ತಾವು ಕೇಳಿದ ವಿಚಾರ ಸತ್ಯ ಅನ್ನೋದು ಸಾರ್ವಜನಿಕರಿಗೆ ಗೊತ್ತಾಗಿದೆ. ಅಲ್ಲದೇ, ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಲ್ಲೂ ನಿಮ್ಮ ಕಾಲೇಜು ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಾಣವಾಗಿದ್ಯಾ ಎಂದು ಮಾಹಿತಿ ಕೇಳಿದ್ದಾರೆ. ಕಾಲೇಜಿನ ಪ್ರಿನ್ಸಿಪಾಲ್ ಕೂಡ ಇಲ್ಲಿ ಯಾವುದೇ ಹೆಲಿಪ್ಯಾಡ್ ಆಗಲಿ, ರಸ್ತೆಯಾಗಲಿ, ಶೌಚಾಲಯವಾಗಲಿ ನಿರ್ಮಾಣವಾಗಿಲ್ಲ ಅನ್ನೋದನ್ನು ಲಿಖಿತ ರೂಪದಲ್ಲಿ ಪತ್ರದ ಮುಖೇನ ಉತ್ತರಿಸಿದ್ದಾರೆ. ಈ ಮೂಲಕ ಇಲ್ಲಿ ದೊಡ್ಡ ಗೋಲ್ ಮಾಲ್ ಆಗಿರೋದು ನಿಜಕ್ಕೂ ಖಾತರಿಯಾಗಿದೆ.
ಒಟ್ಟಾರೆ ಅಧಿಕಾರಿಗಳು ಕಾಮಗಾರಿ ಮಾಡಿದ್ದೇವೆ ಎಂದು ಹೇಳಿ 20 ಲಕ್ಷಕ್ಕೂ ಅಧಿಕ ಹಣವನ್ನು ಲಪಟಾಯಿಸಿರೋದು ದಾಖಲೆ ಸಹಿತ ಬಯಲಾಗಿದೆ.