ಚಿಕ್ಕಮಗಳೂರು: ಕೊರೊನಾ ಉತ್ತುಂಗದ ಕಾಲದಲ್ಲಿ ಹಳ್ಳಿ-ಹಳ್ಳಿ, ಮನೆ-ಮನೆ ಸುತ್ತಿ ಕೆಲಸ ಮಾಡಿದ್ದರೂ, ಭಾರೀ ಮಳೆ ಇರುವ ಕಾರಣ ಸಾರಿಗೆ ವ್ಯವಸ್ಥೆ ಇಲ್ಲದೆ ಮೂರು ದಿನ ಕೆಲಸಕ್ಕೆ ಬಾರದಿದ್ದಕ್ಕೆ ಸಂಬಳ ಕೊಡ್ತಿಲ್ಲ ಎಂದು ಆರೋಪಿಸಿ ಆಶಾ ಕಾರ್ಯಕರ್ತೆಯರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿಡುವಾಳೆ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಎಂಟು ಆಶಾ ಕಾರ್ಯಕರ್ತೆಯರು ಡ್ಯೂಟಿ ಮಾಡುತ್ತಿದ್ದರು. ಆದರೆ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಾರಿಗೆ ಸೌಲಭ್ಯ ಇಲ್ಲದ ಕಾರಣ ಕೆಲಸಕ್ಕೆ ಬರಲು ಸಾಧ್ಯವಾಗಿಲ್ಲ. ಅದಕ್ಕೆ ಆರೋಗ್ಯಾಧಿಕಾರಿ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿರುವ 8 ಆಶಾ ಕಾರ್ಯಕರ್ತೆಯರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆಯೇ ಧರಣಿಗೆ ಕೂತಿದ್ದಾರೆ. ನೀವು ಕೆಲಸವನ್ನೇ ಮಾಡಿಲ್ಲ ನಿಮಗೇಕೆ ಸಂಬಳ ಎಂದು ವೈದ್ಯರು ಸಹಿ ಹಾಕಿಲ್ಲವಂತೆ.
ವೈದ್ಯರು ಸಹಿ ಹಾಕಿದ್ರೆ, ನರ್ಸ್‍ಗಳು ಹಾಕಲ್ಲ, ನರ್ಸ್‍ಗಳು ಸಹಿ ಹಾಕಿದ್ರೆ ವೈದ್ಯರು ಹಾಕಲ್ಲ ಎಂದು ಆಶಾ ಕಾರ್ಯಕರ್ತೆಯರು ಅವಲತ್ತು ತೋಡಿಕೊಂಡಿದ್ದಾರೆ. ತಿಂಗಳಿಗೆ 50-60 ಸಾವಿರ ಸಂಬಳ ಪಡೆಯೋ ವೈದ್ಯರು ವಾರಕ್ಕೆ ಬರೋದು ಎರಡೇ ದಿನ. ಆದ್ರೆ, ಮೂರುವರೆ ಸಾವಿರ ಸಂಬಳಕ್ಕೆ ತಿಂಗಳ ಪೂರ್ತಿ ಕೆಲಸ ಮಾಡೋ ಆಶಾ ಕಾರ್ಯಕರ್ತೆಯರಿಗೆ ಸಂಬಳ ನೀಡದ್ದಕ್ಕೆ ಸ್ಥಳೀಯರು ಕೂಡ ಆರೋಗ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.