ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ್ದಕ್ಕಾಗಿ ಕಾಲೇಜು ವಿದ್ಯಾರ್ಥಿಯನ್ನು ಆಟೋದಿಂದ ಕೆಳಗೆ ತಳ್ಳಿ ಕೊಲೆ ಮಾಡಿದ ಪ್ರಕರಣವನ್ನು ಖಂಡಿಸಿ ನೂರಾರು ಎಬಿವಿಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಡಿಎಸ್ಬಿಜಿ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ರಶ್ಮಿ (19) ವರ್ಷ, ಜನವರಿ 4ರಂದು ಕಾಲೇಜು ಮುಗಿಸಿಕೊಂಡು ಮನೆಗೆ ಹೋಗುವ ವೇಳೆ ಚೇತನ್ ಎಂಬಾತ ತನ್ನ ಆಟೋದಲ್ಲಿ ಹತ್ತಿಸಿಕೊಂಡು ಹೋಗಿ ಪ್ರೀತಿಸುವಂತೆ ಕಿರುಕುಳ ಕೊಟ್ಟಿದ್ದ. ಇದಕ್ಕೆ ರಶ್ಮಿ ಒಪ್ಪದಿದ್ದಾಗ ಆಕೆಯನ್ನು ಆಟೋದಿಂದ ಕೆಳಗೆ ತಳ್ಳಿದ್ದಾನೆ. ಗಂಭೀರ ಗಾಯಗೊಂಡಿದ್ದ ಯುವತಿಯನ್ನು ತಕ್ಷಣ ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಮಾರ್ಗ ಮಧ್ಯೆ ರಶ್ಮಿ ಕೊನೆಯುಸಿರೆಳೆದಿದ್ದಾಳೆ. ಈ ಬಗ್ಗೆ ಆಟೋ ಚಾಲಕ ಚೇತನ್ ವಿರುದ್ಧ ಸಂಬಂಧಿಕರು ಪೊಲೀಸರಿಗೆ ದೂರು ನೀಡಿ ನ್ಯಾಯಕ್ಕಾಗಿ ಒತ್ತಾಯಸಿದ್ದಾರೆ.
ರಶ್ಮಿ ಸಾವಿನ ಹಿನ್ನಲೆ ಇಂದು ನೂರಾರು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಮೂಡಿಗೆರೆಯಲ್ಲಿ ಪ್ರತಿಭಟನೆ ನಡೆಸಿದರು. ಮೃತ ರಶ್ಮಿ ಭಾವ ಚಿತ್ರ ಹಿಡಿದು ನಗರದ ಎಂಜಿಎಂ ಆಸ್ವತ್ರೆಯಿಂದ ತಹಶೀಲ್ಡಾರ್ ಕಚೇರಿಯ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ವಿದ್ಯಾರ್ಥಿನಿ ರಶ್ಮಿ ಸಾವಿಗೆ ಕಾರಣವಾಗಿರುವ ಆರೋಪಿ ಚೇತನ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ತಹಶೀಲ್ಡಾರ್ಗೆ ಮನವಿ ಸಲ್ಲಿಸಿದರು.