ಚಿಕ್ಕಮಗಳೂರು: ಮಹಾ ಮಳೆಗೆ ಗುಡ್ಡ ಕುಸಿತ ಸಂಭವಿಸಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆನಾಡು ಭಾಗದ ಹತ್ತಾರು ಕುಟುಂಬಗಳು ತಮ್ಮ ಮನೆ-ಮಠ ಕಳೆದುಕೊಂಡು ಇಂದಿಗೆ ಒಂದು ವರ್ಷವಾಯಿತು.
ಕಳೆದ ವರ್ಷ ಇದೇ ದಿನದಂದು ಮೂಡಿಗೆರೆ ತಾಲೂಕಿನ ಮಲೆಮನೆ, ದುರ್ಗದ ಹಳ್ಳಿ, ಮಧುಗುಂಡಿ ಭಾಗದಲ್ಲಿ ಗುಡ್ಡ ಕುಸಿತ ಸಂಭವಿಸಿ, ಜನರು ತಮ್ಮ ಮನೆ ಜಮೀನು ಹಾಗೂ ಕಾಫಿ ತೋಟಗಳನ್ನು ಕಳೆದುಕೊಂಡು ತೊಂದರೆಗೊಳಗಾಗಿದ್ದರು.
ಈ ಘಟನೆ ಬಳಿಕ ಸ್ಥಳಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹಲವು ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ಸಂದರ್ಭದಲ್ಲಿ ಸಂತ್ರಸ್ತರಿಗೆ ಬದಲಿ ಮನೆ, ಜಮೀನು ನೀಡುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಅಂದು ಸಿಎಂ ಜೊತೆ ಸ್ಥಳಕ್ಕೆ ಭೇಟಿ ನೀಡಿದ್ದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬಳಿಕ ಆ ಕಡೆ ತಲೆನೂ ಹಾಕಿಲ್ಲ. ತಮ್ಮದೆಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿರುವ ಜನ ಇಂದಿಗೂ ಸಂಕಷ್ಟದಲ್ಲೇ ಜೀವನ ದೂಡುತ್ತಿದ್ದಾರೆ.
ಮನೆ ಕಳೆದುಕೊಂಡವರು ಬಾಡಿಗೆ ಮನೆಯಲ್ಲಿದ್ದರೆ ಅವರಿಗೆ ಬಾಡಿಗೆ ಪಾವತಿಸಲು ಜಿಲ್ಲಾಡಳಿತ ಧನ ಸಹಾಯ ನೀಡುತ್ತಿತ್ತು. ಆದರೆ, ಕಳೆದ ಏಳು ತಿಂಗಳಿನಿಂದ ಬಾಡಿಗೆ ಹಣವನ್ನೂ ನೀಡದೆ ಜಿಲ್ಲಾಡಳಿತ ಸತಾಯಿಸುತ್ತಿದೆ. ಒಂದೊಂದು ರೂಪಾಯಿಗೂ ಪರದಾಡುವಂತಾಗಿದೆ. ಪರಿಹಾರ ಸಿಗದೇ ಬದುಕು ಅತಂತ್ರವಾಗಿದೆ ಎಂದು ಸಂತ್ರಸ್ತ ಕುಟುಂಬಗಳು ಅಳಲು ತೋಡಿಕೊಂಡಿದ್ದಾರೆ. ಈ ಬಾರಿ ಮತ್ತೆ ಧಾರಾಕಾರ ಮಳೆ ಸುರಿಯುತ್ತಿದ್ದು, ಮತ್ತೆ ಕಳೆದ ವರ್ಷದಂತೆಯೇ ಅವಘಡಗಳು ನಡೆದರೆ ಸ್ಥಿತಿ ಏನು? ಎಂಬ ಆತಂಕದಲ್ಲಿ ಬಡ ಜನರಿದ್ದಾರೆ.