ಚಿಕ್ಕಮಗಳೂರು: ತಾಲೂಕಿನ ಮಲ್ಲಂದೂರು ಸಮೀಪದ ಗಿರೀಶ್ ಎಂಬುವರ ತೋಟದಲ್ಲಿ ವಿಚಿತ್ರ ಅಣಬೆವೊಂದು ಹುಟ್ಟಿದೆ. ನಿನ್ನೆ ಸಂಜೆ ಕಾಣದ ಈ ಅಣಬೆ ಬೆಳಗಾಗುವಷ್ಟರಲ್ಲಿ ವಿಚಿತ್ರವಾಗಿ ಬೆಳೆದಿದ್ದು, ನೋಡುಗರ ಕೌತುಕಕ್ಕೆ ಕಾರಣವಾಗಿದೆ. ಈ ರೀತಿಯ ಅಣಬೆಗಳು ತುಂಬಾ ವಿರಳ. ಇದನ್ನು ಮೆಟ್ಟಿಲು ಅಣಬೆ ಅಥವಾ ಬಲೆ ಅಣಬೆ ಅಂತಾನೂ ಕರೆಯುತ್ತಾರೆ. ಗುಡುಗು, ಸಿಡಿಲು, ಮಿಂಚು ಬರುವ ವೇಳೆ ಈ ರೀತಿಯ ಅಣಬೆಗಳು ಹುಟ್ಟುತ್ತವೆ ಅನ್ನೋದು ಸ್ಥಳೀಯರ ಮಾತು.
''ನಿನ್ನೆ ಸಂಜೆ ತಾಲೂಕಿನ ಮಲೆನಾಡು ಭಾಗದಲ್ಲಿ ಸಮೃದ್ಧ ಮಳೆಯಾಗಿದೆ. ಮಲ್ಲಂದೂರು ಭಾಗದಲ್ಲಿ ಗುಡುಗು, ಮಿಂಚು, ಸಿಡಿಲು ಸಹಿತ ಮಳೆ ಸುರಿಸಿದೆ. ಹಾಗಾಗಿ, ನಿನ್ನೆ ಸಂಜೆ ಇಲ್ಲದ ಈ ಅಣಬೆ ಬೆಳಗಾಗುವಷ್ಟರಲ್ಲಿ ಈ ರೀತಿಯಾಗಿ ಬೆಳೆದಿದೆ. ಇತ್ತೀಚೆಗೆ ಈ ರೀತಿಯ, ಇಷ್ಟು ದೊಡ್ಡ ಬಲೆ ಅಣಬೆ ನಾವು ನೋಡಿರಲಿಲ್ಲ. ಮಳೆ ಕೊರತೆ ಇರಬಹುದು. ಆದರೆ, ಈಗ ಮಳೆ ಸುರಿಯುತ್ತಿದೆ. ಇದರಿಂದ ಈ ರೀತಿಯ ಬಲೆ ಅಣಬೆ ಹುಟ್ಟಿರಬಹುದು ಅಂತ ಸ್ಥಳೀಯರು ಮಾತನಾಡುತ್ತಿದ್ದಾರೆ'' ಎಂದು ಗಿರೀಶ್ ತಮ್ಮ ಕೌತುಕ ಹೇಳಿಕೊಂಡಿದ್ದಾರೆ.
ಹಲವು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಅಡಿ ಅಗಲದ ಅಪರೂಪದ ಅಣಬೆಯೊಂದು ಕಂಡು ಬಂದಿತ್ತು. ಜಿಲ್ಲೆಯ ಯಲ್ಲಾಪುರ ಪಟ್ಟಣದ ಸೈಯದ್ ಅಲಿ ಎಂಬುವರ ತೋಟದಲ್ಲಿ ಕಾಡು ಜಾತಿಗೆ ಸೇರಿದ ಅಪರೂಪದ ಬೃಹತ್ ಅಣಬೆ ಕಾಣಿಸಿಕೊಂಡಿತ್ತು. ಇದು ಕೂಡ ಸ್ಥಳೀಯರ ಗಮನ ಸೆಳೆದಿತ್ತು.
ಇದನ್ನೂ ಓದಿ: ಬೆಳ್ತಂಗಡಿ: ವಿಷಪೂರಿತ ಅಣಬೆ ಸೇವಿಸಿ ತಂದೆ–ಮಗ ಸಾವು